ಬ್ಯಾಂಕ್ ಶಾಖೆ ಆರಂಭಿಸಲು ಆಗ್ರಹ

Published on

ಸುರಪುರ: ಹುಣಸಗಿ ಮತ್ತು ಕೆಂಭಾವಿಯಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸಬೇಕು ಎಂದು ರಾಜ್ಯ ರೈತ ಸಂಘ-ಹಸಿರು ಸೇನೆ ತಾಲೂಕು ಘಟಕ ಸೋಮವಾರ ಒತ್ತಾಯಿಸಿತು.

ನಗರದ ಡಿಡಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆಯುವ ವೇಳೆ ರೈತ ಕುಸಿದು ಬಿದ್ದ ಕಾರಣ ದಿಢೀರ್ ಪ್ರತಿಭಟನೆ ಮಾಡಿ ಕೂಡಲೇ ಶಾಖೆ ಆರಂಭಿಸುವAತೆ ಆಗ್ರಹಿಸಿತು.

ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಮಾತನಾಡಿ, ಸುರಪುರ ಡಿಸಿಸಿ ಬ್ಯಾಂಕ್‌ಗೆ ಹದನೂರ ಗ್ರಾಮದ ರೈತ ಸೋಮವಾರ ಸಾಲ ಪಡೆಯಲು ಆಗಮಿಸಿದ್ದರು. ಈ ವೇಳೆ ಅವರು ಸುಸ್ತಾಗಿ ಕುಸಿದು ಬಿದ್ದ ಕಾರಣ ತಕ್ಷಣ ಅವರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಇಂತಹ ಘಟನೆ ಮತ್ತೆ ಮರುಕಳಿಸಬಾರದೆಂಬ ಕಾರಣಕ್ಕಾಗಿ ಶಾಖೆಗಳನ್ನು ತೆರೆಯಬೇಕು ಎಂದು ಅವರು ಒತ್ತಾಯಿಸಿದರು.

ಯಾದಗಿರಿ ಜಿಲ್ಲೆಯಲ್ಲಿ ಸುರಪುರ ದೊಡ್ಡ ತಾಲೂಕು. ಅವಳಿ ತಾಲೂಕಿಗೆ ಒಂದೇ ಒಂದು ಸಹಕಾರ ಬ್ಯಾಂಕ್ ಇದಾಗಿದೆ. ಈ ಬ್ಯಾಂಕ್‌ಗೆ ಸುಮಾರು ಐದು ಹೋಬಳಿ ಒಳಪಡುತ್ತಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ರೈತರ ಖಾತೆ ಒಂದೇ ಬ್ಯಾಂಕ್‌ನಿAದ ನಿಭಾಯಿಸಲು ಆಗುವುದಿಲ್ಲ. ಅಲ್ಲದೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುತ್ತಾರೆ. ಈ ಹಣಕ್ಕಾಗಿ ಕೆಂಭಾವಿ, ಹುಣಸಗಿ, ಕೊಡೇಕಲ್, ನಾರಾಯಣಪುರ ಮತ್ತು ಕಕ್ಕೇರಾದಿಂದ ಪ್ರತಿದಿನ ಸುಮಾರು ೫೦ರಿಂದ ೮೦ ಕಿಮೀ ದೂರದಿಂದ ಬರುತ್ತಾರೆ. ಹೀಗಾಗಿ ರೈತರ ಈ ಸಮಸ್ಯೆ ತಪ್ಪಿಸುವುದಕ್ಕಾಗಿ ಕೂಡಲೇ ಶಾಖೆ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.

ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಕೆಂಭಾವಿ-ಹುಣಸಗಿಯಲ್ಲಿ ಎರಡು ಹೊಸ ಶಾಖೆ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಸುರಪುರ ಡಿಸಿಸಿ ಬ್ಯಾಂಕ್ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹುಣಸಗಿ ಮತ್ತು ಕೆಂಭಾವಿಯಲ್ಲಿ ಡಿಸಿಸಿ ಬ್ಯಾಂಕ್‌ನ ಶಾಖೆ ಕೂಡಲೇ ಆರಂಭಿಸಬೇಕು ಎಂದು ರಾಜ್ಯ ರೈತ ಸಂಘ-ಹಸಿರು ಸೇನೆ ತಾಲೂಕು ಘಟಕ ಒತ್ತಾಯಿಸಿತು. ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಹಾಗೂ ವಿವಿಧ ಗ್ರಾಮದ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net