

ಬಾಗೇಪಲ್ಲಿ : ತಾಲೂಕಿನ ಯಲ್ಲಂಪಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕರನ್ನು ವರ್ಗಾವಣೆ ಮಾಡದಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ರೈತ ಸಂಘ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಶಾಖಾ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿತು.
ಯಲ್ಲಂಪಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿನೋದ್ ಕುಮಾರ್ 3 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ನರೇಗಾ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಿದ್ದಾರೆ, ಪಿಎಂಇಜಿಪಿ, ಸಿಎಂಇಜಿಪಿ ಇನ್ನೂ ಮುಂತಾದ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿದ ಅರ್ಹರಿಗೆ ಬ್ಯಾಂಕ್‌ನಿಂದ ಸಕಾಲಕ್ಕೆ ಸಾಲ ಮಂಜೂರು ಮಾಡಿ ಸ್ವಯಂ ಉದ್ಯೋಗಕ್ಕೆ ನೆರವಾಗಿದ್ದಾರೆ, ಆದರೆ ಕೆಲವರು ವ್ಯವಸ್ಥಾಪಕರನ್ನು ವರ್ಗಾವಣೆ ಮಾಡಬೇಕು ಎಂದು ಉದ್ದೇಶಪೂರ್ವಕವಾಗಿ ಹೋರಾಟ ಮಾಡಿರುವುದು ಖಂಡನೀಯ ಎಂದು ದಸಂಸ ಜಿಲ್ಲಾ ಸಂಚಾಲಕ ಬಿ.ವಿ.ವೆಂಕಟರವಣ ಕಿಡಿಕಾರಿದರು.
ಶಾಖೆ ವ್ಯಾಪ್ತಿಯಲ್ಲಿ ಸುಮಾರು 50 ಗ್ರಾಮಗಳಿವೆ, ಇದುವರೆಗೂ ವ್ಯವಸ್ಥಾಪಕರ ವಿರುದ್ಧ ಯಾವುದೇ ದೂರು ಬಂದಿಲ್ಲ, ಕೆಲವರು ವೈಯಕ್ತಿಕ ಮತ್ತು ಸ್ವಾರ್ಥಕ್ಕಾಗಿ ರೈತರನ್ನು ಒಗ್ಗೂಡಿಸಿ ವ್ಯವಸ್ಥಾಪಕರ ವಿರುದ್ಧ ಧರಣಿ ಮಾಡಿಸುತ್ತಿದ್ದಾರೆ. ಬ್ಯಾಂಕ್‌ನಿಂದ ಪಡೆದ ಸಾಲವನ್ನು ಕೇಳುವುದು ತಪ್ಪೇ? ಕಾನೂನು ಬದ್ದವಾಗಿ ಕೆಲಸ ಮಾಡುವುದು ತಪ್ಪೇ ಎಂದು ಜಿಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ ಪ್ರಶ್ನಿಸಿದರು.
ರೈತ ಸಂಘದ ಸಂಚಾಲಕ ಎಸ್.ಲಕ್ಷಣ್‌ರೆಡ್ಡಿ, ಸಂಚಾಲಕಿ ಸಿ.ಉಮಾ, ತಾಲೂಕು ಕರವೇ ಅಧ್ಯಕ್ಷ ಹರೀಶ್, ಮುಖಂಡರಾದ ಯರ‌್ರಕಿಟ್ಟಪ್ಪ, ಆನಂದ್, ಗಂಗುಲಪ್ಪ, ಚಿನ್ನಪೂಜಪ್ಪ, ಗೋಪಿ, ರವಿ, ಜಯಂತ್ ಇತರರಿದ್ದರು.