ಬ್ಯಾಂಕ್ ಮ್ಯಾನೇಜನರ್ ಎಂದು ಹೇಳಿ 1.27 ಲಕ್ಷ ರೂ. ವಂಚನೆ

cyber crime
Published on

ಹಾಸನ: ಕೆನರಾ ಬ್ಯಾಂಕಿನ ಮ್ಯಾನೇಜರ್ ಎಂದು ಹೇಳಿ ಎಟಿಎಂ ಲ್ಯಾಪ್ಸ್ ಆಗಿದ್ದು ಸರಿ ಮಾಡುವುದಾಗಿ ಹೇಳಿ ಚನ್ನರಾಯಪಟ್ಟಣ ತಾಲೂಕು, ಬನವಾಸೆ ಗ್ರಾಮದ ಭೈರಶೆಟ್ಟಿ ಎಂಬುವವರಿಂದ ಓಟಿಪಿ ಪಡೆದು 1,27,898 ರೂಪಾಯಿ ಹಣ ವಂಚಿಸಿರುವ ಘಟನೆ ನಡೆದಿದೆ.

ಭೈರಶೆಟ್ಟಿ ಬನವಾಸೆ ಗ್ರಾಮದ ಹಾಲಿನ ಡೈರಿಗೆ ಅಧ್ಯಕ್ಷರಾಗಿದ್ದು, ಸಾತೇನಹಳ್ಳಿ ಕೆನರಾ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ಆ.17ರಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಅವರ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಯ 9827766469 ಸಂಖ್ಯೆಯಿಂದ ಕರೆ ಬಂದಿದೆ. ‘ನಾನು ಕೆನರಾ ಬ್ಯಾಂಕಿನ ಮ್ಯಾನೇಜರ್, ನಿಮ್ಮ ಎಟಿಎಂ ಲ್ಯಾಪ್ಸ್ ಆಗಿದೆ. ಇದನ್ನು ಸರಿ ಮಾಡಬೇಕು. ನಾವು ಓಟಿಪಿ ಕಳುಹಿಸುತ್ತೇವೆ, ಅದನ್ನು ಹೇಳಿ,’ ಎಂದಿದ್ದಾರೆ. ಅದರಂತೆ ಭೈರಶೆಟ್ಟಿ ಮೊಬೈಲ್‌ಗೆ ಬಂದ ಓಟಿಪಿಯನ್ನು ಹೇಳಿದ್ದಾರೆ. ಆಗ ಬ್ಯಾಂಕ್ ಖಾತೆಯಲ್ಲಿದ್ದ 1,27,898 ಹಣ ವರ್ಗಾವಣೆಯಾಗಿದೆ. ಕೂಡಲೇ 9827766469 ಸಂಖ್ಯೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ.

ಸಾತೇನಹಳ್ಳಿ ಕೆನರಾಬ್ಯಾಂಕ್ ಮ್ಯಾನೇಜರ್ ಭೇಟಿ ಮಾಡಿದಾಗ ತಾವು ಕರೆ ಮಾಡಿಲ್ಲವೆಂದು ತಿಳಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ, ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಭೈರಶೆಟ್ಟಿ ಅವರು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net