ಗುಂಡ್ಲುಪೇಟೆ: ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿ ಸಂಬಂಧ ರೈತರಿಗೆ ನೋಟಿಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬೇಗೂರಿನ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂಭಾಗ ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ರೈತ ಸಂಘದ ಪದಾಧಿಕಾರಿಗಳು ತಾಲೂಕಿನ ಬೇಗೂರು ಗ್ರಾಮದ ಮುಖ್ಯರಸ್ತೆಯ ಮೂಲಕ ಸಾಗಿ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಎದುರು ಧರಣಿ ಕುಳಿತು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆ ತಾಲೂಕು ಅಧ್ಯಕ್ಷ ವೀರನಪುರ ನಾಗಪ್ಪ ಮಾತನಾಡಿ, ಬೇಗೂರು ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ಬೆಳೆಸಾಲ ಪಡೆದಿರುವ ಬೆಳಚಲವಾಡಿ ಗ್ರಾಮದ ನಂಜುಂಡಸ್ವಾಮಿ ಅವರಿಗೆ ಬ್ಯಾಂಕ್ ಹೆಚ್ಚು ಪ್ರಮಾಣದಲ್ಲಿ ಬಡ್ಡಿ ವಿಧಿಸಿ ಜತೆಗೆ ಕೂಡಲೇ ಪಾವತಿಸುವಂತೆ ನೋಟಿಸ್ ನೀಡಿದೆ. ಬರಗಾಲ ಮತ್ತು ಅತಿವೃಷ್ಟಿಯಿಂದ ರೈತರು ಬೆಳೆದ ಬೆಳೆಗಳ ಹಾನಿಗೊಳಗಾಗಿದೆ. ಜತೆಗೆ ಬೆಲೆ ಸಿಗದೆ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. ಇಂತಹ ಸಂದರ್ಭದ ಬ್ಯಾಂಕ್‌ನವರು ನೋಟಿಸ್ ನೀಡುವ ಮೂಲಕ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬ್ಯಾಂಕ್ ಅಧಿಕಾರಿಗಳ ಮೂಲಕ ಸಾಲ ವಸೂಲಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿವೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನೊಂದ ರೈತರ ನೆರವಿಗೆ ನಿಲ್ಲಬೇಕು. ಜತೆಗೆ ಬಡ್ಡಿ ಮನ್ನಾ ಮಾಡಿ ಕೇವಲ ಸಾಲದ ಮೊತ್ತವನ್ನು ಮಾತ್ರ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುರೇಖಾ ಪ್ರತಿಭಟನಾಕಾರರ ಮನವಿ ಆಲಿಸಿ ಮಾತನಾಡಿ, ಈ ಬಗ್ಗೆ ಮುಖ್ಯ ಕಚೇರಿಗೆ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪುಟ್ಟೇಗೌಡ, ಹಸಿರು ಸೇನೆ ಅಧ್ಯಕ್ಷ ಕಮರಹಳ್ಳಿ ಪ್ರಸಾದ್, ಕಾರ್ಯದರ್ಶಿ ಯಡವನಹಳ್ಳಿ ಸಿದ್ದರಾಜ ಸೋಮಹಳ್ಳಿ ನವೀನ್, ಶಿವಕುಮಾರ್, ಹಕ್ಕಲಪುರ ಸ್ವಾಮಿ, ಪಡಗೂರು ಮಹದೇವಸ್ವಾಮಿ ಸೇರಿದಂತೆ ಹಲವರು ಇದ್ದರು.