

ದಾವಣಗೆರೆ: ಮಧ್ಯಾಹ್ನದ ಉಪಹಾರ ಯೋಜನೆ ಅನುಷ್ಠಾನದಲ್ಲಿದ್ದ ಜಂಟಿ ಬ್ಯಾಂಕ್ ಖಾತೆಯ ಉಸ್ತುವಾರಿ ಬದಲಾಯಿಸಿ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿರುವುದನ್ನು ವಿರೋಧಿಸಿ ಬಿಸಿಯೂಟ ತಯಾರಕರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಎಐಟಿಯುಸಿ ಸಂಯೋಜಿತ ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ರವಾನಿಸಿದರು.
ಮುಖ್ಯ ಅಡುಗೆಯವರು ಹಾಗೂ ಎಸ್‌ಡಿಎಂಸಿ ಪದನಿಮಿತ್ತ ಕಾರ್ಯದರ್ಶಿಯಾದ ಮುಖ್ಯ ಶಿಕ್ಷಕರ ಜಂಟಿ ಖಾತೆಯಡಿ ಇದುವರೆಗೆ ಯೋಜನೆಯನ್ನು ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಹೆಸರಿನಲ್ಲಿ ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ನಿರ್ವಹಿಸಲು ಜ.4ರಂದು ಆಯುಕ್ತರು ಆದೇಶಿಸಿ ಮುಖ್ಯ ಅಡುಗೆಯವರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯ ಅಡುಗೆಯವರು, ಸಹಾಯಕ ಅಡುಗೆಯವರಿಗೆ ಕನಿಷ್ಠ ವೇತನ, ಆರೋಗ್ಯ ವಿಮೆ ಜಾರಿಗೊಳಿಸಬೇಕು. ನಿವೃತ್ತಿಯಾದ ಅಡುಗೆಯವರಿಗೆ ವೇತನ ಅಥವಾ ಇಡುಗಂಟು ಕೊಡುವಂತೆ ಆಗ್ರಹಿಸಿ ಹಲವಾರು ಹೋರಾಟ ನಡೆಸಿದ್ದರೂ ಈ ಆದೇಶದ ಮೂಲಕ ಯೋಜನೆಯನ್ನೇ ದುರ್ಬಲಗೊಳಿಸುವ ಹುನ್ನಾರ ನಡೆಸಲಾಗಿದೆ ಎಂದು ದೂರಿದರು.
ಚಾಲ್ತಿಯಲ್ಲಿದ್ದ ಖಾತೆ ನಿರ್ವಹಣೆ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಶಾಲೆಗಳ ಅಡುಗೆ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ಬಳಕೆ ಮಾಡಿಕೊಂಡಲ್ಲಿ ಚುನಾವಣಾ ಸಿಬ್ಬಂದಿಗೆ ಕೊಡುವ ಭತ್ಯೆಯನ್ನೂ ಇವರಿಗೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಮುಖಂಡರಾದ ಮಳಲ್ಕೆರೆ ಜಯಮ್ಮ, ಸರೋಜಮ್ಮ, ಪದ್ಮಾ, ನ್ಯಾಮತಿ ಜಯಮ್ಮ, ಬಿದರಗಡ್ಡೆ ಹಾಲಮ್ಮ, ಮಂಗಳಗೌರಿ, ಸಾಲಕಟ್ಟೆ ಮಂಜುಳಾ, ಕಡ್ಲೆಗೊಂದಿ ಸರೋಜಮ್ಮ, ರಾಧಾ, ಮೀನಾಕ್ಷಿ, ಸಿ.ರಮೇಶ್ ಇತರರಿದ್ದರು