ಬ್ಯಾಂಕಿನಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ : ರೈತರಿಗೆ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎಸ್.ಅನಂತ್ ಸಲಹೆ

28tnpnewsfile01
Published on

ಮೈಸೂರು : ಯೂನಿಯನ್ ಬ್ಯಾಂಕ್ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಕೃಷಿ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ದೊರಕಿಸಿಕೊಡುತ್ತಿದೆ. ಬ್ಯಾಂಕಿನಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಡಿಸಿಕೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕು ಎಂದು ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಕೆ.ಎಸ್.ಅನಂತ್ ಸಲಹೆ ನೀಡಿದರು.

ತಿ.ನರಸೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಯೂನಿಯನ್ ಬ್ಯಾಂಕ್ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೃಷಿ ಪಾಠ ಶಾಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ಯಾಂಕುಗಳು ನೀಡುವ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಜತೆಗೆ ನಿಗದಿತ ಸಮಯದಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡಿದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ. ರೈತ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವುದರಿಂದ ಬ್ಯಾಂಕುಗಳು ಹಾಗು ರೈತರು ಆರ್ಥಿಕಾಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡಬಹುದಾಗಿದೆ ಎಂದರು.
ಬ್ಯಾಂಕಿನಲ್ಲಿ ಸಿಗಬಹುದಾದ ಕೃಷಿ, ಕೃಷಿ ಅಭಿವೃದ್ಧಿ ಸಾಲಗಳು, ಕೃಷಿಯೇತರ ಸಾಲಗಳು, ರೈತರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸದ ಸಾಲಗಳು, ಗೋಲ್ಡ್‌ಲೋನ್ ಇನ್ನು ಮುಂತಾದ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳುವಂತೆ ಮನವಿ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವರುಣ ಕ್ಷೇತ್ರದ ನಿಕಟಪೂರ್ವ ಜೆಡಿಎಸ್ ಅಧ್ಯಕ್ಷ ತಾಯೂರು ಪ್ರಕಾಶ್ ಬ್ಯಾಂಕುಗಳು ವಿದ್ಯಾರ್ಥಿಗಳು ಹಾಗು ರೈತರ ಶ್ರೇಯೋಭಿವೃದ್ದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿವೆ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಸ್ಥಿತಿವಂತರು ಬ್ಯಾಂಕಿನಲ್ಲಿ ಇಡಲಾಗುವ ಠೇವಣಿ ಹಣದಿಂದ ರೈತರಿಗೆ ಸಾಲ ಸೌಲಭ್ಯ ನೀಡುತ್ತಿವೆ. ಸ್ಥಿತಿವಂತರು ಗ್ರಾಮೀಣರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಾರೆ. ಆದರೆ ಬ್ಯಾಂಕುಗಳು ರೈತರನ್ನು ನಂಬಿ ಅವರ ಠೇವಣಿ ಹಣವನ್ನೇ ಸಾಲವಾಗಿ ನೀಡುತ್ತವೆ. ಹಾಗಾಗಿ ಬ್ಯಾಂಕುಗಳು ನೀಡುವ ಸಾಲದ ಹಣದ ಮರುಪಾವತಿಯನ್ನು ಸಕಾಲಕ್ಕೆ ಮಾಡುವ ಮೂಲಕ ರೈತರು ಹೆಚ್ವಿನ ಸೌಲಭ್ಯ ಪಡೆದುಕೊಳ್ಳುವಂತೆ ಮನವಿಮಾಡಿದರು.


ಬ್ಯಾಂಕಿನ ಶಾಖಾ ಪ್ರಬಂಧಕರಾದ ಮಣಿಕುಮಾರ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂಜೀವ ನಾಯಕ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಟೇಲಿಂಗಪ್ಪ, ಬ್ಯಾಂಕಿನ ಉಪವ್ಯವಸ್ಥಾಪಕಿ ಪಿ.ಶಾಲಿನಿ, ಶ್ರೀಶರಾವ್, ಗ್ರಾಪಂ ಸದಸ್ಯ ಗಿರೀಶ್, ಮಂಜು, ಶಾಲೆಯ ಮುಖ್ಯೋಪಾಧ್ಯಾಯ ಸಿದ್ದರಾಜು, ವಲಯ ಮೇಲ್ವಿಚಾರಕಿ ಪವಿತ್ರಾ, ಕೃಷಿ ಮೇಲ್ವಿಚಾರಕ ಟಿ.ಆರ್.ಕುಮಾರ್, ಬಿ.ಎಂ.ನಾಗೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net