ಬ್ಯಾಂಕಿನ ಸಾಲಸೌಲಭ್ಯ ಪಡೆದು ಉದ್ದಿಮೆ ಸ್ಥಾಪಿಸಿ

16 ckm 4
ಚಿಕ್ಕಮಗಳೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಇಲಾಖೆ, ಸರ್ಕಾರಿ ಪಾಲಿಟೆಕ್ನಿಕ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಅರಿವು ಕಾರ್ಯಾಗಾರವನ್ನು ಉದ್ಯಮಿ ಮುನೀರ್ ಅಹಮದ್ ಉದ್ಘಾಟಿಸಿದರು. ಶಾಂತಾರಾಮ ಹೆಗಡೆ, ಮಹೇಶ್ ಕುಮಾರ್, ಶ್ರೀಧರ ಮೂರ್ತಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸರಿಯಾದ ಹಣಕಾಸಿನ ವ್ಯವಸ್ಥೆ ಇದ್ದಾಗ ಮಾತ್ರ ಉಧ್ಯಮ ಸ್ಥಾಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬ್ಯಾಂಕಿನಲ್ಲಿ ದೊರೆಯುವ ಸಾಲಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಉದ್ಯಮಿ ಮುನೀರ್ ಅಹಮದ್ ತಿಳಿಸಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಇಲಾಖೆ, ಸರ್ಕಾರಿ ಪಾಲಿಟೆಕ್ನಿಕ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಪರ್ ಸಲ್ಫೇಟ್ ಕೇರಳದಿಂದ ರಾಜ್ಯಕ್ಕೆ ಬರುತ್ತಿತ್ತು. ಇದು ದುಭಾರಿಯಾಗಿದ್ದನ್ನು ಮನಗಂಡು ತಾವು ಉದ್ಯಮವನ್ನು ಸ್ಥಾಪಿಸಿ ಟನ್‌ಗೆ ೫ ಸಾವಿರ ರೂ. ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಿದ ಪರಿಣಾಮ ಉದ್ಯಮ ಲಾಭದಾಯಕವಾಗಿ ನಡೆಯುತ್ತಿದೆ. ಪ್ರತಿಯೊಬ್ಬರೂ ಇಂತಹ ಉಧ್ಯಮಗಳನ್ನು ಸ್ಥಾಪಿಸುವ ಮೂಲಕ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿ ಎಂದು ಸಲಹೆ ನೀಡಿದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಾಂತರಾಮ್ ಹೆಗಡೆ ಮಾತನಾಡಿ, ಹೇಳಿದರೆ ಕೇಳಿದವರಿಗೆ ಲಾಭ ಎಂಬAತೆ ಇಂದಿನ ಕಾರ್ಯಾಗಾರದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ಅವರ ಉಪಯುಕ್ತವಾದ ಮಾಹಿತಿ ನೀಡಿದ್ದಾರೆ. ಇದನ್ನು ಸದ್ಬಳಕೆ ಮಾಡಿಕೊಂಡು ಯುವಜನತೆ ಉದ್ಯಮಶೀಲರಾಗಬೇಕು ಎಂದರು.

ಕಾಫಿ ಡೇ ಸಿದ್ಧಾರ್ಥ ಹೆಗ್ಡೆ ಅವರು ದೇಶಾದ್ಯಂತ ಉದ್ಯೋಗ ಕಲ್ಪಿಸುವಲ್ಲಿ ಹೆಸರು ಮಾಡಿದ್ದಾರೆ. ಈ ಸಭೆಯಲ್ಲಿ ಬ್ಯಾಂಕಿನ ಉದ್ಯೋಗಿಗಳು ಮತ್ತು ಉದ್ಯಮಿಗಳು ಭಾಗವಹಿಸಿದ್ದು, ಹಿಂದೆ ವ್ಯಾಪಾರ ಪರವಾನಗಿ, ಸಾಲಕ್ಕೆ ವರ್ಷಾನುಗಟ್ಟಲೆ ಸುತ್ತಾಡಬೇಕಿತ್ತು, ಇಂದು ಸೌಲಭ್ಯ ನೀಡಲು ಅವರೇ ಆಗಮಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.

ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ರ‍್ಯಾಂಪ್ ಯೋಜನೆಯಡಿ ಹಲವಾರು ಉದ್ಯೋಗಗಳನ್ನು ಸೃಷ್ಟಿಸಿದೆ. ಅಂತಿಮ ವರ್ಷದ ತಾಂತ್ರಿಕ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದ್ದು, ಸ್ವ-ಉದ್ಯೋಗ ಸ್ಥಾಪನೆಗೆ ಬೇಕಾದ ಜ್ಞಾನವನ್ನು ಕೊಡಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಶ್ರೀಧರ್ ಮೂರ್ತಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಮಹೇಶ್, ಕುಮಾರ್, ರಘು ಪ್ರಸಾದ್, ಚಿಕ್ಕಪ್ಪ ಲಕ್ಷ್ಮೀ ನಾರಾಯಣ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net