ಬೌದ್ಧಿಕ ವಿಕಾಸಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕ

8 hlk 2
Published on

ಹೊಳಲ್ಕೆರೆ: ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕ ಎಂದು ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ತಿಳಿಸಿದರು.
ತಾಲೂಕಿನ ಮಲ್ಲಾಡಿಹಳ್ಳಿಯ ರಾಘವೇಂದ್ರ ಗುರುಕುಲ ವಿದ್ಯಾಪೀಠದ 2023-24ನೇ ಸಾಲಿನ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರು.
ವಿದ್ಯಾರ್ಥಿಗಳು ಇಂದು ಪೋಷಕರ ಒತ್ತಾಯದಲ್ಲಿ ಅಂಕಗಳಿಸುವ ತುಡಿತದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಕಡೆಗಣಿಸುತ್ತಿರುವುದು ವಿಷಾದನೀಯ. ಪಾಠದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಉದ್ಘಾಟನೆ ನೆರವೇರಿಸಿದ ತಾಲೂಕಿನ ಮಲ್ಲಾಡಿಹಳ್ಳಿ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಕೆಂಚಪ್ಪ ಮಾತನಾಡಿ, ಪಠ್ಯೇತರ ಚಟುವಟಿಕೆಗಳಿಗೆ ಇಲಾಖೆಯಲ್ಲಿ ಹತ್ತು ಹಲವಾರು ಯೋಜನೆಗಳಿದ್ದು, ಅವುಗಳನ್ನು ಶಾಲೆಗಳಲ್ಲಿ ಅಳವಡಿಸಿ ಮಕ್ಕಳು ಭಾಗವಹಿಸುವಂತೆ ಮಾಡಿದಾಗ ವಿದ್ಯಾರ್ಥಿ-ಶಿಕ್ಷಕರ ನಡುವಿನ ಸಂಬಂಧ ವೃದ್ಧಿಯಾಗಿ ಮಕ್ಕಳ ಕಲಿಕೆ ಸುಗಮವಾಗುತ್ತದೆ ಎಂದರು.
ಶಿಕ್ಷಕ ಎಂ.ಓ.ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಇಂತಹ ಚಟುವಟಿಕೆಗಳು ಅಗತ್ಯ. ಮಲ್ಲಾಡಿಹಳ್ಳಿಯ ಗುರುಕುಲ ವಿದ್ಯಾಪೀಠದಲ್ಲಿ ಓದುವ ಮಕ್ಕಳಿಗೆ ಸರ್ವತೋಮುಖ ಬೆಳವಣಿಗೆಗೆ ಅವಕಾಶಗಳು ಲಭ್ಯವಿದ್ದು, ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದರು.
ಮುಖ್ಯಶಿಕ್ಷಕ ಜಿ.ಟಿ.ಗೀತಾ ವೆಂಕಟೇಶ್ ಉಪಸ್ಥಿತರಿದ್ದರು. ಶ್ರಾವಣಿ ಪ್ರಾರ್ಥಿಸಿ, ತೇಜಸ್ವಿನಿ ಸ್ವಾಗತಿಸಿದರು. ಶಿಕ್ಷಕಿ ಡಿ.ಭಾಗ್ಯಲಕ್ಷ್ಮೀ ನಿರೂಪಿಸಿದರು. ಧವಳಾ ಐ.ಎಸ್.ವಂದಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ರಚಿತಗೊಂಡ ಗೋಡೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net