ಬೌದ್ಧರಿಗೆ ಬುದ್ಧಗಯಾ ಆಡಳಿತ ವಹಿಸಲು ಆಗ್ರಹಿಸಿ ಪ್ರತಿಭಟನೆ

21-KGLPHOTO-1,
ಬಿಹಾರದ ಬುದ್ಧ ವಿಹಾರದ ಬುದ್ಧಗಯಾದ ಆಡಳಿತವನ್ನು ಬೌದ್ಧರಿಗೆ ವಹಿಸಬೇಕೆಂದು ಆಗ್ರಹಿಸಿ ಕೊಳ್ಳೇಗಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ನಾಮ ಫಲಕಗಳ ಪ್ರದರ್ಶನ ಮಾಡಿದರು.
Published on

ಕೊಳ್ಳೇಗಾಲ: ಬಿಹಾರದ ಬುದ್ಧ ವಿಹಾರದ ಬುದ್ಧಗಯಾದ ಆಡಳಿತವನ್ನು ಬೌದ್ಧರಿಗೆ ವಹಿಸಬೇಕೆಂದು ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರಬುದ್ಧ ಎಜುಕೇಷನ್, ಚಾರಿಟಬಲ್ ಸೊಸೈಟಿ, ಜೇತವನ ಬುದ್ಧವಿಹಾರ ಭಾರತೀಯ ಬೌದ್ಧ ಮಹಾಸಭಾ, ಡಾ.ಬಿ. ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ ಮೆರವಣಿಗೆ ತಾಲೂಕು ಪಂಚಾಯಿತಿ ಕಚೇರಿ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಸಾಗಿ ತಾಲೂಕು ಕಚೇರಿ ತಲುಪಿತು. ನಂತರ ಪ್ರತಿಭಟನಾಕಾರರು ಗ್ರೇಡ್ 2 ಉಪತಹಸೀಲ್ದಾರ್ ಧನಂಜಯ ಅವರಿಗೆ ಮನವಿ ಸಲ್ಲಿಸಿದರು.

ತಿ.ನರಸೀಪುರದ ಬೌದ್ಧಿರತ್ನ ಬಂತೇಜಿ ಮಾತನಾಡಿ, ಬಿಹಾರದ ಬುದ್ಧಗಯಾ ಮಹಾ ವಿಹಾರದ ಮುಕ್ತಿ ಆಂದೋಲನ ಪರವಾಗಿ ಕಳೆದ ಫ್ರೆಬ್ರವರಿಯಿಂದಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಹೋರಾಟವನ್ನು ಹತ್ತಿಕ್ಕಲು ಬಿಹಾರ ಸರ್ಕಾರ ಮುಂದಾಗಿದೆ. ಬೌದ್ಧ ಬಿಕ್ಕು ಗಳನ್ನು ಅಜ್ಞಾತ ಸ್ಥಳಗಳಿಗೆ ಕೊಂಡೊಯ್ದಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆಯೆ ಅಥವಾ ಬಂಧಿಸಿದ್ದಾರೋ ತಿಳಿದು ಬಂದಿಲ್ಲ. ಆದರೆ, ಬುದ್ಧಗಯಾದ ಟ್ರಸ್ಟ್ ಕಮಿಟಿಯಲ್ಲಿ ಜಿಲ್ಲಾಧಿಕಾರಿ ಸೇರಿದಂತೆ 4 ಜನ ಹಿಂದುಗಳು, 4 ಜನ ಬೌದ್ಧರಿದ್ದಾರೆ. ಈ ಕಮಿಟಿ ರದ್ದಾಗಬೇಕು. ಎಲ್ಲ ಧರ್ಮ ಕೇಂದ್ರಗಳು ಆ ಧರ್ಮದ ಅನುಯಾಯಿಗಳ ಸುಪರ್ದಿಯಲ್ಲಿರುತ್ತದೆ. ಆದರೆ, ಬುದ್ಧಗಯಾದಲ್ಲಿ ಈ ಪರಿಸ್ಥಿತಿ ಇಲ್ಲ ಎಂದು ಹೇಳಿದರು.

ಆದ್ದರಿಂದ ಬುದ್ಧಗಯಾವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು. ಕೇಂದ್ರ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಸುಪ್ರೀಂಕೋರ್ಟ್ ಸೊಮೊಟೊ ಪ್ರಕರಣ ದಾಖಲಿಸಿಕೊಂಡು ಬಿಹಾರ ಸರ್ಕಾರಕ್ಕೆ ಒತ್ತಡ ತರಬೇಕು. ಬೌದ್ಧರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಚೆನ್ನಾಲಿಂಗಹಳ್ಳಿ ಚೇತವನ ಬೌದ್ಧ ವಿಹಾರದ ಮನೋರಖ್ಖಿತ ಬಂತೇಜಿ, ಮೈಸೂರಿನ ಸುಗತಪಾಲ್ ಬಂತೇಜಿ, ಮೈಸೂರಿನ ವಿಶ್ವ ಮೈತ್ರಿ ಬುದ್ಧವಿಹಾರದ ಡಾ.ಕಲ್ಯಾಣಸಿರಿ ಬಂತೇಜಿ, ಮಂಗಳೂರು ಬುದ್ಧ ವಿಹಾರ ಧಮ್ಮಪಾಲ್ ಬಂತೇಜಿ, ಭಾರತೀಯ ಬೌದ್ಧ ಮಹಾಸಭೆಯ ರಾಚಪ್ಪಾಜಿ, ಸಿದ್ದರಾಜು, ಮಣಿ, ನಟರಾಜು ಮಾಳಿಗೆ, ಪುಟ್ಟಮ್ಮ, ಪುಟ್ಟಗೌರಿ, ರಾಜೇಶ್ವರಿ, ಚಂದನ್, ಚಿನ್ನಸ್ವಾಮಿ ಮಾಳಿಗೆ, ಭೀಮನಗರ ಯಜಮಾನರುಗಳು, ಅಂಬೇಡ್ಕರ್ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net