

ಚಾಮರಾಜನಗರ:ಬಿಹಾರದ ಬುದ್ಧ ಗಯಾ ಮಹಾಬೋಧಿ ವಿಹಾರ ಮುಕ್ತಿ ಆಂದೋಲನದ ಸತ್ಯಾಗ್ರಹ ನಿರತ ಬೌದ್ಧ ಬಿಕ್ಕುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬೌದ್ಧ ಸಂಘ-ಸಂಸ್ಥೆಗಳು ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೊಳ್ಳೇಗಾಲ ಚೇತವನ ಬೌದ್ಧ ವಿಹಾರದ ಮನೋರಖ್ಖಿತ ಬಂತೇಜಿ ಮಾತನಾಡಿ, ಪ್ರಪಂಚದ ಬೌದ್ಧರಿಗೆ ಪವಿತ್ರವಾದ ಸ್ಥಳವಾದ ಬಿಹಾರದ ಬುದ್ಧಗಯಾ ಮಹಾಬೋಧಿ, ಮಹಾ ವಿಹಾರದ ಟೆಂಪಲ್ ಆಕ್ಟ್-1949 ಅನ್ನು ರದ್ದುಗೊಳಿಸಬೇಕು. ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ವಹಿಸಬೇಕು ಎಂದು ನೂರಾರು ಬೌದ್ಧ ಬಿಕ್ಕುಗಳು ಕಳೆದ ಫೆ.12 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಶಾಂತಿಯುತವಾಗಿ ನಡೆಸುತ್ತಿದ್ದಾರೆ. ಈ ಹೋರಾಟವನ್ನು ವಿಫಲಗೊಳಿಸಲು ಕೆಲವು ಪುರೋಹಿತಶಾಹಿ ವರ್ಗದ ಹಿತಾಸಕ್ತಿಗಳು ಹಲವಾರು ಕುತಂತ್ರಗಳನ್ನು ಹೆಣೆದ ಅಮರಣಾಂತ ಉಪವಾಸ ಸತ್ಯಾಗ್ರಹ ನಿರತ ಬಿಕ್ಕುಗಳ ಎದುರಿಗೆ ನಕಲಿ ಬಿಕ್ಕುಗಳನ್ನು ಸೃಷ್ಟಿಸಿ, ಅವರಿಗೆ ಭೋಜನ ದಾನ ಮಾಡಿ ಹೋರಾಟದ ಬಿಕ್ಕುಗಳನ್ನು ಅಪಮಾನಿಸಿದ್ದಾರೆ ಎಂದು ದೂರಿದರು.
ಬುದ್ಧ ಮಂದಿರದ ಮುಂದೆ ಬಿಕ್ಕುಗಳನ್ನು ಪ್ರಚೋದಿಸಲು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುತ್ತಾ ಕುಣಿದಾಡಿದ್ದಾರೆ. ಆ ಮೂಲಕ ಮಹಾಬೋಧಿಯ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ. ಆದರೂ ಸಹ ಬಂತೇಜಿಗಳು ಶಾಂತಿಯುತವಾಗಿ ತಾಳ್ಮೆಯಿಂದ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಶಾಂತಿಯುತ ಸತ್ಯಾಗ್ರಹ ಮುಂದುವರೆಸಿದ್ದಾರೆ. ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡುವವರೆಗೂ ಹೋರಾಟ ನಡೆಸುವುದಾಗಿ ಬಿಕ್ಕು ಸಂಘ ಸ್ಪಷ್ಟಪಡಿಸಿ ಸರ್ಕಾರದ ಮಾತುಕತೆ ಆಹ್ವಾನವನ್ನು ತಿರಸ್ಕರಿಸಿದೆ ಎಂದರು.
ಟಿ.ನರಸೀಪುರ ನಳಂದ ಬೌದ್ಧ ವಿಹಾರದ ಬೋಧಿರತ್ನ ಭಂತೇಜಿ ಮಾತನಾಡಿ, ಬಿಹಾರ ಸರ್ಕಾರ ಕುತಂತ್ರದಿಂದ ಪ್ರತಿಭಟನಾ ನಿರತ ದಿಕ್ಕುಗಳನ್ನು ಬಂಧಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ. ಕೆಲವು ಬಿಕ್ಕುಗಳನ್ನು ಒತ್ತಾಯಪೂರ್ವಕವಾಗಿ ಆರೋಗ್ಯದ ನೆಪಮಾಡಿ ಆಂಬುಲೆನ್ಸ್ ಗೆ ಹತ್ತಿಸಿದ್ದಾರೆ. ಕೆಲವರನ್ನು ವಿನಾಃ ಕಾರಣ ಪೊಲೀಸರು ಬಂಧನ ಮಾಡಿದ್ದಾರೆ. ಮಹಿಳಾ ಬಿಕ್ಕುಣಿಯರ ಜೊತೆಗೆ ಅಸಭ್ಯವಾಗಿ ಪೊಲೀಸರು ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಕೂಡಲೇ ಬಿಕ್ಕುಗಳ ಮೇಲೆ ದೌರ್ಜನ್ಯ ಎಸಗಿರುವ ಪೊಲೀಸರನ್ನು ಅಮಾನತುಗೊಳಿಸಬೇಕು. ಬುದ್ಧಗಯಾ ಮಹಾಬೋಧಿ, ಮಹಾ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬಿಕ್ಕುಗಳಿಗೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬುದ್ಧರತ್ನ ಬಂತೇಜಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜು, ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ, ದೊಡ್ಡಿಂದವಾಡಿ ಸಿದ್ದರಾಜು, ಹಿರಿಯೂರು ರಾಜಣ್ಣ, ಬುದ್ಧ ಮಹೇಶ್, ಶಿವಣ್ಣ, ಪುಷ್ಪ ಮರಿಸ್ವಾಮಿ, ಮಂಜುಳಾ ಬಸವರಾಜು, ಮಹೇಶ್, ಎನ್.ನಾಗಯ್ಯ, ವಕೀಲರಾದ ಪುಟ್ಟಸ್ವಾಮಿ ರಾಮಸಮುದ್ರ, ಮಹೇಂದ್ರ ಕಾಡಹಳ್ಳಿ, ವೆಂಕಟೇಶ್, ಬ.ಮ.ಕೃಷ್ಣಮೂರ್ತಿ, ಬ್ಯಾಡಮೂಡ್ಲು ಬಸವಣ್ಣ ಹಾಗೂ ಇತರರು ಹಾಜರಿದ್ದರು.
ಜಗತ್ತಿನ ಶಾಂತಿಪ್ರಿಯ ಭಗವಾನ್ ಗೌತಮ ಬುದ್ಧ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ಶಾಂತಿಪ್ರಿಯರಾಗಿದ್ದಾರೆ. ಶಾಂತಿಯುವಾಗಿ ಹೋರಾಟ ಮಾಡುತ್ತಿದ್ದ ಬಿಕ್ಕುಗಳ ಮೇಲೆ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ.
|ಡಾ.ಕಲ್ಯಾಣ ಸಿರಿ, ಬಂತೇಜಿ, ವಿಶ್ವ ಮೈತ್ರಿ ಬುದ್ಧ ವಿಹಾರ, ಮೈಸೂರು