ಬೌದ್ಧ ಬಿಕ್ಕುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ

11rajesh1
Published on

ಚಾಮರಾಜನಗರ: ಬಿಹಾರದ ಬುದ್ಧ ಗಯಾ ಮಹಾಬೋಧಿ ವಿಹಾರ ಮುಕ್ತಿ ಆಂದೋಲನದ ಸತ್ಯಾಗ್ರಹ ನಿರತ ಬೌದ್ಧ ಬಿಕ್ಕುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬೌದ್ಧ ಸಂಘ-ಸಂಸ್ಥೆಗಳು ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೊಳ್ಳೇಗಾಲ ಚೇತವನ ಬೌದ್ಧ ವಿಹಾರದ ಮನೋರಖ್ಖಿತ ಬಂತೇಜಿ ಮಾತನಾಡಿ, ಪ್ರಪಂಚದ ಬೌದ್ಧರಿಗೆ ಪವಿತ್ರವಾದ ಸ್ಥಳವಾದ ಬಿಹಾರದ ಬುದ್ಧಗಯಾ ಮಹಾಬೋಧಿ, ಮಹಾ ವಿಹಾರದ ಟೆಂಪಲ್ ಆಕ್ಟ್-1949 ಅನ್ನು ರದ್ದುಗೊಳಿಸಬೇಕು. ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ವಹಿಸಬೇಕು ಎಂದು ನೂರಾರು ಬೌದ್ಧ ಬಿಕ್ಕುಗಳು ಕಳೆದ ಫೆ.12 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಶಾಂತಿಯುತವಾಗಿ ನಡೆಸುತ್ತಿದ್ದಾರೆ. ಕೆಲವರು ಈ ಹೋರಾಟವನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಬಿಕ್ಕುಗಳ ಮೇಲೆ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ ಎಂದರು.

ಬಿಹಾರ ಸರ್ಕಾರ ಕುತಂತ್ರದಿಂದ ಬಿಕ್ಕುಗಳ ಆರೋಗ್ಯದ ನೆಪ ಮಾಡಿಕೊಂಡು ಕೆಲವರನ್ನು ಆಂಬುಲೆನ್ಸ್‌ಗೆ, ಸತ್ಯಾಗ್ರಹ ನಡೆಸಲು ಅನುಮತಿ ಪಡೆದಿಲ್ಲ ಎಂದು ಕೆಲವರನ್ನು ಪೊಲೀಸ್ ವಾಹನಕ್ಕೆ ಬಲವಂತವಾಗಿ ಹಾಕಿದ್ದಾರೆ. ಮಹಿಳಾ ಬಿಕ್ಕುಣಿಯರ ಜತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬಿಕ್ಕುಗಳ ಮೇಲೆ ದೌರ್ಜನ್ಯ ಎಸಗಿರುವ ಪೊಲೀಸರನ್ನು ಅಮಾನತ್ತು ಮಾಡಬೇಕು. ಮಹಾಬೋಧಿ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಟಿ.ನರಸೀಪುರ ನಳಂದ ವಿಹಾರದ ಬೋಧಿರತ್ನ ಬಂತೇಜಿ ಮಾತನಾಡಿ, ಬಿಹಾರ ಸರ್ಕಾರ ಮತ್ತು ಪೊಲೀಸರು ಬಿಕ್ಕುಗಳ ಮೇಲೆ ಎಸಗಿರುವ ಅಮಾನವೀಯ ಕೃತ್ಯ ಜಗತ್ತಿನ ಬೌದ್ಧರಿಗೆ ಅಪಾರವಾದ ನೋವನ್ನು ಉಂಟುಮಾಡಿದೆ. ಬಿಕ್ಕುಗಳನ್ನು ಬಂಧನ ಮಾಡಿರುವುದು ಅತ್ಯಂತ ಖಂಡನೀಯ. ಜಗತ್ತಿನಲ್ಲಿ ಶಾಂತಿಯನ್ನು ಬೋಧಿಸಿದ ಬುದ್ಧನ ಅನುಯಾಯಿಗಳ ಹಿಂಸೆ ಮಾಡಿರುವುದು ಪ್ರಸ್ತುತ ಆಡಳಿತ ವೈಖರಿಯನ್ನು ತೋರಿಸುತ್ತದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಡಾ.ಕಲ್ಯಾಣ ಸಿರಿ ಬಂತೇಜಿ, ಬುದ್ಧರತ್ನ ಬಂತೇಜಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜು, ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ, ಶಿವಣ್ಣ, ಮಲ್ಲಿಕ್, ದೊಡ್ಡಿಂದವಾಡಿ ಸಿದ್ದರಾಜು, ಬುದ್ಧ ಮಹೇಶ್, ಪುಷ್ಪ ಮರಿಸ್ವಾಮಿ, ಮಂಜುಳಾ ಬಸವರಾಜು, ಯರಿಯೂರು ರಾಜಣ್ಣ, ಎನ್.ನಾಗಯ್ಯ, ವಕೀಲ ಪುಟ್ಟಸ್ವಾಮಿ ರಾಮಸಮುದ್ರ, ಮಹೇಂದ್ರ, ವೆಂಕಟೇಶ್ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net