ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗೆ ಸಾವಿರ ಕೋಟಿ ರೂ.ಅನುದಾನ ಮೀಸಲಿಡಿ

CTD----------01..
Published on

ಚಿತ್ರದುರ್ಗ: ಬೌದ್ಧರು ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಕನಿಷ್ಠ ಒಂದು ಸಾವಿರ ಕೋಟಿ ರೂ. ಅನುದಾನ ಮೀಸಲಿಡುವಂತೆ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದರು.

ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಗೌತಮ ಬುದ್ಧ ಪ್ರತಿಷ್ಠಾನದ ಸಭೆಯಲ್ಲಿ ಮಾತನಾಡಿ, ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ರಚಿಸಿ, ಆಂಧ್ರಪ್ರದೇಶದ ಬುದ್ಧವನ ಮಾದರಿಯಲ್ಲಿ 200 ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಪರಿಶಿಷ್ಟ ಜಾತಿ ಬೌದ್ಧರ ಅಭಿವೃದ್ಧಿ ನಿಗಮ ಸ್ಥಾಪನೆ, ಗೌತಮ ಬುದ್ಧ ಜಯಂತಿಗೆ ರಜೆ ಘೋಷಣೆ ಮಾಡಬೇಕು ಎಂದರು.

ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಬೌದ್ಧರಿಗೆ ನೀಡುವಂತೆ ಶಿಫಾರಸು ಮಾಡಬೇಕು. ಕರ್ನಾಟಕ ಸರ್ಕಾರ ಪ್ರತಿ ವರ್ಷ ಫೆ.12ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವ ಆಚರಿಸಬೇಕು. ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ತಂತ್ರಾಂಶ ಸರಿಪಡಿಸಬೇಕು.

ಸಂವಿಧಾನದ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿಗಳು ಹಿಂದು, ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಸೇರಿದವರಾಗಿದ್ದಾರೆ. ಆದರೆ, ಜಾತಿ ಪ್ರಮಾಣ ಪತ್ರದಲ್ಲಿ ಧರ್ಮ ನಮೂದಿಸದೆ ನಿಯಮ ಉಲ್ಲಂಘಿಸಲಾಗುತ್ತಿದೆ. ಧರ್ಮದ ಉಲ್ಲೇಖಕ್ಕಾಗಿ ಅಗತ್ಯ ಮಾರ್ಪಾಡು ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ನವಬೌದ್ಧರೆಂದು ದಾಖಲಿಸಿದ ಪರಿಶಿಷ್ಟ ಜಾತಿಯವರನ್ನು ಪರಿಶಿಷ್ಟ ಜಾತಿಯೆಂದು ಪರಿಗಣಿಸ ಬೇಕು. ಧಾರ್ಮಿಕ ಅಲ್ಪಸಂಖ್ಯಾತರಾಗಿ 2ಎ ಪ್ರಮಾಣ ಪತ್ರಪಡೆದ ಬೌದ್ಧರ ಅಭಿವೃದ್ಧಿಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಯೋಜನೆಗಳಲ್ಲಿ ಪ್ರತ್ಯೇಕ ಗುರಿ ನಿಗದಿ ಪಡಿಸಬೇಕು.

ಗ್ರಾಪಂ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬುದ್ಧ ವಿಹಾರಕ್ಕಾಗಿ 5-10ಎಕರೆ ಜಮೀನು ಕಾಯ್ದಿರಿಸಬೇಕು. ಬುದ್ಧ ವಿಹಾರಗಳ ನಿರ್ವಹಣೆಗೆ ಅನುದಾನದೊಂದಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಸಾಮ್ರಾಟ್ ಅಶೋಕರ ಶಿಲಾ ಶಾಸನಗಳನ್ನು ಸಂರಕ್ಷಿಸಲು ಯೋಜನೆ ರೂಪಿಸಬೇಕು. ರಾಜ್ಯದ ಹಲವೆಡೆ ಬುದ್ಧ ವಿಹಾರ ನಿಮಾಣಕ್ಕೆ ದಾನಿಗಳು ಭೂಮಿ ನೀಡಿದ್ದು, ಬುದ್ಧ ವಿಹಾರ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಡಾ.ಕರಿಬಸಪ್ಪ, ಇ. ನಾಗೇಂದ್ರಪ್ಪ, ಇಂದೂಧರ ಗೌತಮ್, ತಿಪಟೂರು ಮಂಜು, ಲಕ್ಷ್ಮೀದೇವಿ, ಹರೀಶ್, ಗಿರಿಜಾ, ಕೃಷ್ಣಪ್ಪ, ಬೆಸ್ಕಾಂ ತಿಪೇಸ್ವಾಮಿ, ಬನ್ನಿಕೋಡ್ ರಮೇಶ್, ಶಾಂತಮ್ಮ, ತಿಪ್ಪಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net