

ಹಾಸನ: ಮೊಘಲರು, ಇಸ್ಲಾಂ ಹಾಗೂ ಬ್ರಿಟಿಷರ ಆಳ್ವಿಕೆ ಮತ್ತು ದಾಳಿಯ ದೌರ್ಜನ್ಯಕ್ಕೆ ಒಳಗಾದ ಎಲ್ಲ ದೇಶ, ಸಂಸ್ಕೃತಿ, ಜನಾಂಗ ನಾಶವಾಗಿದ್ದರೂ ಭಾರತ ಉಳಿದಿರುವುದಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದ ಅವರಂತಹ ಸಾವಿರಾರು ವ್ಯಕ್ತಿಗಳು ಕಾರಣ ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟಕ ಅಧ್ಯಕ್ಷ ಜಗದೀಶ್ ಕಾರಂತ್ ತಿಳಿಸಿದರು.
ನಗರದ ಶ್ರೀ ಶಂಕರಮಠದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ದಿಕ್ಸೂಜಿ ಭಾಷಣದಲ್ಲಿ ಮಾತನಾಡಿದ ಅವರು, ಇಂದಿನ ಸ್ವಾತಂತ್ರೃಕ್ಕೆ ಕಾರಣರಾದ ಎಲ್ಲರನ್ನೂ ನೆನಪಿಸಿಕೊಳ್ಳಬೇಕು. ಇತಿಹಾಸವನ್ನು ಸ್ಮರಿಸಿಕೊಂಡಾಗ ಮಾತ್ರ ನಮಗೆ ಸ್ವಾತಂತ್ರ್ಯದ ಬೆಲೆ ಅರ್ಥವಾಗುತ್ತದೆ. ಅಪ್ಪ ಆಗಲಿ, ಅಮ್ಮ ಆಗಲಿ ನಮಗಾಗಿ ಪಟ್ಟ ಪರಿಶ್ರಮ, ಕಷ್ಟವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಕೃತಜ್ಞತೆ ಎಂದು ಕರೆಯಬಹುದು ಎಂದರು.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಇದ್ದಾಗ ಭಾರತದ ಬಗ್ಗೆ ಬ್ರಿಟಿಷರು ಭಾರತ ಎಂದರೆ ಅನಾಗರಿಕ ದೇಶ, ಅವರಿಗೆ ಮನುಷ್ಯತ್ವವೆ ಇಲ್ಲ. ಅಂತಹ ಭಾರತಕ್ಕೆ ನಾವು ಹೋಗಿದ್ದೇವೆ. ಆ ಭಾರತಕ್ಕೆ ನಾವು ಶಿಕ್ಷಣವನ್ನು ಕೊಡುತ್ತಿದ್ದೇವೆ. ತಿಳಿವಳಿಕೆ ಕೊಟ್ಟು ಅವರನ್ನು ಮನುಷ್ಯರನ್ನಾಗಿ ರೂಪಿಸುತ್ತಿದ್ದೇವೆ. ಇವರೆಲ್ಲಾ ಕಾಡು ಪ್ರಾಣಿಗಳಂತೆ ಬದುಕಿದವರು ಎಂದು ಬ್ರಿಟಿಷರು ಅಪಪ್ರಚಾರ ಮಾಡಿದರು. ಇದಕ್ಕೆ ಪ್ರತಿಯಾಗಿ ಸ್ವಾಮಿ ವಿವೇಕಾನಂದ ಅವರು, ಮನುಷ್ಯನ ಜೀವನದಲ್ಲಿ ಬರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವಂತಹ ಒಂದು ಬೃಹತ್ ಗ್ರಂಥ, ವೇದಗಳು ಹುಟ್ಟಿಕೊಂಡಿದ್ದು ಈ ಭಾರತದಲ್ಲಿ. ಉಪನಿಶತ್ತುಗಳು ಜನ್ಮ ತಾಳಿದ್ದು ಈ ಭೂಮಿಯಲ್ಲಿ. ಋಷಿಮುನಿಗಳ ಅಶ್ರಮದಲ್ಲಿ. ಬ್ರಿಟಿಷರೇ ಅನಕ್ಷರಸ್ಥರು ಎಂದು ಸಾರಿ ಸಾರಿ ಹೇಳಿದರು ಎಂದರು.
ಭಾರತ ಬರಡು ಭೂಮಿ ಅಲ್ಲ, ಅವಿವೇಕಿಗಳ ಭೂಮಿಯೂ ಅಲ್ಲ ಇದು, ಭಿಕ್ಷುಕರ ನಾಡಲ್ಲ ಎನ್ನುವುದಕ್ಕೆ ಇತಿಹಾಸದ ಪುಟ ಸಾಕ್ಷಿ ಇದೆ. ಭಾರತಗ ಹಿರಿಮೆ, ಗರಿಮೆಯನ್ನು ಭಾರತದ ಸಿರಿವಂತಿಕೆ ಮತ್ತು ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಸಾರಿ ಹೇಳುವುದರ ಮೂಲಕ ಭಾರತದ ಶಕ್ತಿ, ತಾಕತ್ತನ್ನು ಜಗತ್ತಿಗೆ ತೋರಿಸಿಕೊಟ್ಟರು. 250 ವರ್ಷಗಳ ಕಾಲ ಬ್ರಿಟಿಷರ ಆಡಳಿತದಲ್ಲಿ ಭಾರತ ನರಳಿದ್ದು ಸತ್ಯ. ಅಷ್ಟೆಲ್ಲಾ ದೌರ್ಜನ್ಯ ನಡೆದರೂ ಕೂಡ ಸೋಲನ್ನು ಒಪ್ಪೊಕೊಂಡು ಶರಣಾಗತಿ ಆದ ಸಮಾಜ ನಮ್ಮದಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞಾ ಇನ್ಫ್ರಾ ಸ್ಟ್ರಕ್ಚರ್ ಡೆವಲಪ್ಪರ್ಸ್‌ನ ಕೆ.ಆರ್. ಲಕ್ಷ್ಮೀಕಾಂತ್, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಲೋಕೇಶ್, ವಿಶ್ವ ಹಿಂದು ಪರಿಷತ್ತು ಅಧ್ಯಕ್ಷ ವೇಣುಗೋಪಾಲ್, ಹಾಸನ ವಿಭಾಗೀಯ ಕಾರ್ಯದರ್ಶಿ ಮಹಿಪಾಲ್, ರಕ್ಷಿತ್ ಭಾರಧ್ವಜ್, ಮಂಜು ಇತರರು ಉಪಸ್ಥಿತರಿದ್ದರು.