ಬೋಳು ಬೆಟ್ಟಕ್ಕೆ ಬನದ ಮೆರಗು

29 Kyalnur 11
Published on

ಕ್ಯಾಲನೂರು: ಸೀತಿ ದೇವಾಲಯದ ಸುಂದರ ಪ್ರದೇಶದಲ್ಲಿ ಮಕ್ಕಳ ಆಟೋಪಕರಣ ಸಹಿತ ಉದ್ಯಾನವನ ನಿರ್ಮಿಸಿ, ಎಲ್ಲರ ಸಹಕಾರದಿಂದ ಇದನ್ನು ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾಗಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ತಾಲೂಕಿನ ಸೀತಿ ಬೆಟ್ಟದಲ್ಲಿ ಕೋಲಾರ ಜಿಲ್ಲಾಡಳಿತ, ಅರಣ್ಯ ಇಲಾಖೆ, ಆಯಿಸ್ಕಾ ಇಂಟರ್ ನ್ಯಾಷನಲ್ ಕರ್ನಾಟಕ ವಲಯದ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಜೀವಿ ವೈವಿಧ್ಯ ವರ್ಷಾಚರಣೆ ಅಂಗವಾಗಿ ಸೀತಿ ಬೆಟ್ಟಕ್ಕೆ ಹಸಿರು ಹೊದಿಕೆ ಹಾಗೂ ‘ಬೋಳು ಬೆಟ್ಟಕ್ಕೆ ಬನದ ಮೆರಗು’ ಎಂಬ ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ ಅವರ ಪರಿಕಲ್ಪನೆಯಲ್ಲಿ ಸೀತಿ ಬೆಟ್ಟದಲ್ಲಿ ವಿವಿಧ ಜಾತಿಯ ಒಂದು ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಉದ್ಯಾನವನದ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ ಡಿಸಿ ಅವರು, ದೇವಾಲಯದಿಂದ ಬೆಟ್ಟದ ಮೇಲಕ್ಕೆ ಸುಮಾರು 1 ಕಿ.ಮೀ. ದೂರ ಚಾರಣ ಮಾಡಿ ಅಲ್ಲಿನ ಸ್ಥಿತಿ ಗಮನಿಸಿದರು.

ಸೀತಿ ಬೆಟ್ಟ ಸ್ವಚ್ಛತೆಗೆ ಸೂಚನೆ: ಸೀತಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿರುವ ದೃಶ್ಯ ಕಂಡ ಡಿಸಿ ಇಂತಹ ಸುಂದರ ಪರಿಸರವಿರುವ ತಾಣದ ಪಕ್ಕದಲ್ಲಿ ಸ್ವಚ್ಛತೆಯೂ ಅಗತ್ಯವಾಗಿದೆ. ಕೆರೆಯಲ್ಲಿರುವ ಕಸ ಹೊರತೆಗೆದು, ಪುನಶ್ಚೇತನಗೊಳಿಸಿ, ಬೆಟ್ಟದಿಂದ ಕೆರೆಗೆ ನೀರು ಹರಿಯುವ ಮಾರ್ಗವಿದ್ದರೆ ಕೆರೆಗೆ ತಲುಪಲು ದಾರಿ ಮಾಡಿ ಎಂದು ಗ್ರಾಪಂ ಕಾರ್ಯದರ್ಶಿಗೆ ಸೂಚಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ್, ಜಿಪಂ ಉಪಕಾರ್ಯದರ್ಶಿ ಕೆ,ಪಿ ಸಂಜೀವಪ್ಪ, ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ, ವಸಂತ್ ಗೌಡ, ಅರಣ್ಯ ಇಲಾಖೆಯ ದೇವರಾಜು, ಹರ್ಷವರ್ದನ್, ಬಿಂದು, ಇಒ ಬಾಬು, ಕೋಲಾರ ಐಇಸಿ ಸಂಯೋಜಕ ಭಾಸ್ಕರ ರೆಡ್ಡಿ, ಗ್ರಾಪಂ ಪಿಡಿಒ ಲಕ್ಷ್ಮೀಪತಿ, ಟ್ರಸ್ಟ್ ಅಧ್ಯಕ್ಷ ತಮ್ಮಯ್ಯ, ಸೀತಿ ಹೊಸೂರು ಮುರಳಿಗೌಡ, ಚಂಜಿಮಲೆ ಮುನೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net