ಬೋಳಕರ ಘಟ ಹಬ್ಬದ ಓಕುಳಿ ಮಹೋತ್ಸವ

10-KGL-3,,
Published on

ಕೊಳ್ಳೇಗಾಲ: ಶ್ರೀಸಿರಿಗಳ್ಳಿ ಲಕ್ಷ್ಮೀದೇವಿ ಅಮ್ಮನವರ ಕಳಶ ಸ್ಥಾಪನೆ ಮತ್ತು ಬೋಳಕರ ಘಟ ಹಬ್ಬದ ಉತ್ಸವದ ಅಂಗವಾಗಿ 26 ವರ್ಷದ ನಂತರ ನಡೆದ ಓಕುಳಿ ಮಹೋತ್ಸವದಲ್ಲಿ ಜನರು ಬಣ್ಣದಲ್ಲಿ ನೀರಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಪಟ್ಟಣದ ಹಳೇ ಕುರುಬರ ಬೀದಿ ಹಾಗೂ ಹೊಸ ಕುರುಬರ ಬೀದಿಯ ಭಕ್ತ ಮಂಡಳಿ ವತಿಯಿಂದ ಆಯೋಜಿಸಿದ್ದ ಶ್ರೀಸಿರಿಗಳ್ಳಿ ಲಕ್ಷ್ಮೀದೇವಿ ಹಾಗೂ ಬೋಳಕರ ಘಟ ಹಬ್ಬದ ಅಂಗವಾಗಿ ಆಯೋಜಿಸಿದ್ದ ನಾಲ್ಕು ದಿನಗಳ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಏ.7ರಂದು ಶ್ರೀಬೀರೇಶ್ವರ ಹೂ-ಹೊಂಬಾಳೆ ಮತ್ತು ಶ್ರೀಸಿರಿಗಳ್ಳಿ ಲಕ್ಷ್ಮೀದೇವಿ ಅಮ್ಮ ನವರ ಸತ್ತಿಗೆ ಉತ್ಸವ ಮತ್ತು ಕಳಶ ಸ್ಥಾಪನೆ. ಏ.8ರಂದು ಶ್ರೀಲಕ್ಷ್ಮೀ ಅಮ್ಮನವರ ಕಳಶಾರಾಧನೆ ಮತ್ತು ಮಜ್ಜನೋತ್ಸವ ಹಾಗೂ ಘಟ ಎತ್ತುವ ಉತ್ಸವ, ಏ.9 ರಂದು ಶ್ರೀಸಿರಿಗಳ್ಳಿ ಲಕ್ಷ್ಮೀದೇವಿ ಅಮ್ಮನವರ ಕಳಶೋತ್ಸವ ಮತ್ತು ವಸಂತೋತ್ಸವ, ಭೋಜನ ಕೂಟ ಅದ್ದೂರಿಯಾಗಿ ನೆಡೆದಿದ್ದು, ಕೊನೆ ದಿನವಾದ ಒಕುಳಿ ಮಹೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು.

ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ನಿವಾಸಿಗಳು ಮನೆಗಳ ಮುಂದಿನ ಆವರಣದಲ್ಲಿ ಪರಸ್ಪರ ವಿವಿಧ ಬಣ್ಣಗಳನ್ನು ಹಚ್ಚಿಕೊಂಡು ನೀರೆರೆಚಾಡುತ್ತ ಸಂಭ್ರಮಿಸಿದರು. ಡೋಲಿನ ಸದ್ದು ಹಾಗೂ ಡಿಜೆ ಶಬ್ದಕ್ಕೆ ಮಹಿಳೆಯರಾದಿಯಾಗಿ ಬಡಾವಣೆಯ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದ್ದು ಹಬ್ಬದ ಮೆರುಗನ್ನು ಹೆಚ್ಚಿಸಿತು. ಹಬ್ಬದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಆಗಮಿಸಿದ್ದ ನೆಟ್ಟರಿಷ್ಟರು ಓಕುಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡ ಓಕುಳಿ ಮಹೋತ್ಸವ ಸಂಜೆ 5 ಗಂಟೆವರೆವಿಗೂ ನಡೆಯಿತು.

ಸಹಪಂಕ್ತಿ ಭೋಜನ:

ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಶ್ರೀಸಿರಿಗಳ್ಳಿ ಲಕ್ಷ್ಮೀದೇವಿ ಅಮ್ಮನವರ ಕಳಶೋತ್ಸವ ಮತ್ತು ವಸಂತೋತ್ಸವ ನೆರವೇರಿತು. ರಾತ್ರಿ ಹಳೇ ಕುರುಬರ ಬೀದಿಯಲ್ಲಿ ಸಾವಿರಾರು ಜನರಿಗೆ ಮಾಂಸಾಹಾರಿ ಭೋಜನಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಕುರುಬ ಜನಾಂಗದ ಕುಲಸ್ಥರು ಹಾಗೂ ಪಟ್ಟಣದ ಸಾರ್ವಜನಿಕರು ಸಹಪಂಕ್ತಿ ಭೋಜನ ಮಾಡಿದರು. ಹಳೇ ಕುರುಬರ ಬೀದಿ ಯಜಮಾನರಾದ ಮಹದೇವ, ಸುರೇಶ್‌ಗೌಡ, ಎಚ್.ಎಂ.ಪ್ರಕಾಶ್, ಲಿಂಗರಾಜು, ಶಿವಕುಮಾರ್, ಶ್ರೀಧರ್, ಲೋಕೇಶ್, ಹೊಸ ಕುರುಬರ ಬೀದಿ ಗಿರೀಶ್, ಎಸ್.ಮೂರ್ತಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net