

ಹರಪನಹಳ್ಳಿ: ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದು ಪಿಡಿಒಗಳಿಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೂಚನೆ ನೀಡಿದರು.
ಹೊಸಪೇಟೆಯಲ್ಲಿ ಮೇ 20ರಂದು ಆಯೋಜಿಸಿರುವ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದರು. ತಾಲೂಕಿನ ಹಲವಾರು ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಕೊರತೆ ಇದ್ದು, ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕು. ರೈತರಿಗೆ ಹೆಚ್ಚಿನ ಹಣ ನೀಡಿ ನೀರು ಪಡೆಯಿರಿ ಎಂದರು.
ಲಕ್ಷೀಪುರದಲ್ಲಿ ನೀರು ಇದ್ದು, ನೀರಾವರಿ ಇಲಾಖೆ ಅಧಿಕಾರಿಗಳಿಂದ ಸಮಸ್ಯೆಯಾಗಿದೆ ಎಂದು ಪಿಡಿಒ ತಿಳಿಸಿದರು. ಸಾರ್ವಜನಿಕರಿಗೆ ತೊಂದರೆಯಾದರೂ ನಿರ್ಲಕ್ಷೃ ಮಾಡಿದರೆ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ. ಕುಡಿವ ನೀರಿಗಾಗಿ 15 ನೇ ಹಣಕಾಸು ಯೋಜನೆಯಡಿ ಅನುದಾನ ಮೀಸಲಿಡಿ ಎಂದು ತಾಪಂ ಇಒಗೆ ತಾಕೀತು ಮಾಡಿದರು.
ತಾಲೂಕಿನಲ್ಲಿ 231 ಸ್ಮಶಾನಗಳಿದ್ದು, 24 ಸ್ಮಶಾನ ಜಮೀನನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಾಪಂ ಎಡಿ ಸೋಮಶೇಖರ್ ಯು.ಎಚ್.ತಿಳಿಸಿದರು. ಈ ರೀತಿಯ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ. ಯಾರಾದರೂ ಅಡ್ಡಿಪಡಿಸಲು ಮುಂದಾದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ವಿಎ ಹಾಗೂ ಪಿಡಿಒಗಳಿಗೆ ಡಿಸಿ ಸೂಚಿಸಿದರು. ಸ್ಮಶಾನ ಜಾಗ ಹದ್ದುಬಸ್ತು ಮಾಡಿಕೊಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು,
ಕನಕನ ಬಸಾಪುರ ಗ್ರಾಮದಲ್ಲಿ ಹಿಂದು-ಮುಸ್ಲಿಂ ಸ್ಮಶಾನ ಜಾಗ ಒಂದೇ ಕಡೆ ಇದ್ದು, ಹದ್ದುಬಸ್ತು ಮಾಡಲು ಸ್ಥಳೀಯರು ಸಹಕರಿಸುತ್ತಿಲ್ಲವೆಂದು ಪಿಡಿಒ ತಿಳಿಸಿದಾಗ, ಅವರಿಗೆ ಸರ್ಕಾರಿ ಜಾಗದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿ. ಸಂಬಂಧಿಸಿದ ಜಾಗ ಮಾತ್ರ ಹದ್ದಬಸ್ತು ಮಾಡಿ. ಯಾರಿಗೂ ಧಕ್ಕೆಯಾಗದಂತೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹಲವಾರು ದಶಕಗಳಿಂದ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಯಾವುದೇ ದಾಖಲಾತಿ ಹೊಂದಿರದ ಜಿಲ್ಲೆಯ 349 ಹಾಗೂ ತಾಲೂಕಿನ 120 ಗ್ರಾಮಗಳ 20 ಸಾವಿರ ಫಲಾನುಭವಿಗಳಿದ್ದು, ಅವರಿಗೆ ಸಾಧನಾ ಸಮಾವೇಶದಲ್ಲಿ ಹಕ್ಕುಪತ್ರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದರು.
ಎಸಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಬಿ.ವಿ.ಗಿರೀಶಬಾಬು, ತಾ.ಪಂ ಇಒ ಚಂದ್ರಶೇಖರ ವೈ.ಎಚ್., ಸಹಾಯಕ ನಿರ್ದೆಶಕರಾದ ಸೋಮಶೇಖರ, ವೀರಣ್ಣ ಲಕ್ಕಣ್ಣನವರ್, ಮತ್ತೂರು ಬಸವರಾಜ ಇದ್ದರು.