

ಸಿರಗುಪ್ಪ: ತೆಕ್ಕಲಕೋಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ (ಪಿಂಜಾರ್‌ಗೇರಿ) ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಮುದೇನೂರು ಹುಸೇನ್ ಬಾಷಾ ಬೋರ್‌ವೆಲ್ ಕೊರೆಯಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಶಾಲೆಯ ಮುಖ್ಯಗುರು ನಾಗರಾಜ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಮತ್ತು ಬಳಕೆಗೆ ನೀರಿನ ಕೊರತೆ ಎದುರಾದ ಕಾರಣ ಮುದೇನೂರು ಹುಸೇನ್ ಬಾಷಾ 1.35 ಲಕ್ಷ ರೂ. ಖರ್ಚು ಮಾಡಿ ಬೋರ್‌ವೆಲ್ ಕೊರೆಯಿಸಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಒದಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಮುದೇನೂರು ಹುಸೇನ್ ಬಾಷಾ ಮಾತನಾಡಿ, ರಂಜಾನ್ ತಿಂಗಳಲ್ಲಿ ದಾನ ಮಾಡುವುದು ಶ್ರೇಷ್ಠವಾಗಿದ್ದು, ಶಾಲೆಗಾಗಿ ಏನಾದರೂ ಮಾಡಬೇಕು ಎಂದುಕೊಂಡಿದ್ದೆ. ಮುಖ್ಯಗುರು ನೀರಿನ ಸಮಸ್ಯೆ ಕುರಿತು ತಿಳಿಸಿದ್ದರಿಂದ ಬೋರ್‌ವೆಲ್ ಕೊರೆಯಿಸಿದ್ದಾಗಿ ಹೇಳಿದರು.