ಬೋರ್ ವೆಲ್ ಡ್ರಿಲ್ ಬ್ಯಾನ್ ವಾಪಸ್

borwell
Published on

ಬೀದರ್: ನಾಗರಿಕರ, ವಿವಿಧ ಸಂಘಟನೆಗಳ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಕೊನೆಗೂ ನಗರದಲ್ಲಿ ಬೋರ್ ವೆಲ್ ಕೊರೆಯುವಿಕೆ ಮೇಲಿನ ನಿಷೇಧ ಆದೇಶ ಹಿಂಪಡೆದಿದೆ.

ಅನಾವೃಷ್ಟಿ ಹಾಗೂ ಸತತ ಬರದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕಾಪಾಡುವ ಸದುದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ಬೀದರ್ ನಗರದಲ್ಲಿ ಹೊಸದಾಗಿ ಬೋರ್ ವೆಲ್ ಕೊರೆಯುವುದರ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಪ್ರಸಕ್ತ ವರ್ಷ ನಗರ ಸೇರಿದಂತೆ ಜಿಲ್ಲಾದ್ಯಂತ ಅತಿವೃಷ್ಟಿಯಾದ ಹಾಗೂ ಅಂತರ್ಜಲ ಮಟ್ಟ ಗಣನೀಯ ವೃದ್ಧಿಯಾದ ಕಾರಣ ನಿಷೇಧ ಆದೇಶ ವಾಪಸ್ ಗೆ ವ್ಯಾಪಕ ಒತ್ತಡ ಬಂದಿದ್ದವು. ಹೀಗಾಗಿ ನಿಷೇಧ ಆದೇಶ ಹಿಂಪಡೆದು ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಕೆಲವೊಂದು ಷರತ್ತುಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನಗರದಲ್ಲಿ ಬೋರ್ ವೆಲ್ ಕೊರೆಯಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಗುರುದ್ವಾರ, ನರಸಿಂಹ ಝರಣಿ ಹಾಗೂ ಪಾಪನಾಶ ಕೆರೆಯಿಂದ ಅರ್ಧ ಕಿಲೋಮೀಟರ್ ವ್ಯಾಪ್ತಿಯೊಳಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಹೊಸ ಬೋರ್ ವೆಲ್ ಕೊರೆಯಲು ನಗರಸಭೆ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ 5 ಸಾವಿರ ರೂ. ನಿಗದಿಪಡಿಸಲಾಗಿದೆ. ಅನುಮತಿ ನೀಡಲು 20 ದಿನ ಕೊಡಲಾಗಿದೆ. ಈ ಅವಧಿಯಲ್ಲಿ ಅನುಮತಿ ದೊರೆಯದಿದ್ದಲ್ಲಿ 21ನೇ ದಿನ ಅನುಮತಿ ನೀಡಿದಂತೆ ಪರಿಗಣಿಸಬೇಕು. ಅರ್ಜಿಯಿಂದ ಬಂದ ಹಣ ಮಳೆ ನೀರು ಕೊಯ್ಲಿಗಾಗಿ ಬಳಸಬೇಕು. ಅರ್ಜಿ ಜತೆಗೆ ಸಂಬಂಧಿತರು ಕಡ್ಡಾಯ ಸ್ಥಳದ ದಾಖಲೆಗಳನ್ನು ಸಲ್ಲಿಸಬೇಕು. ಬಿಡಿಎದಿಂದ ಕೃಷಿಯೇತರ(ಎನ್ಎ) ಅನುಮೋದನೆ ನೀಡಿದ ಜಾಗಗಳಿಗೆ ಮಾತ್ರ ಅನುಮತಿ ನೀಡಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ಕಳೆದ ದಿ.23ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಬೋರ್ ವೆಲ್ ನಿಷೇಧ ವಾಪಸ್ ವಿಷಯ ಕುರಿತು ಚರ್ಚೆ ನಡೆದಿದೆ. ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಬೋರ್ ವೆಲ್ ಕೊರೆಯುವುದಕ್ಕೆ ನಿಷೇಧ ಇರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಾಗಿ ಕೆಲ ಧಾರ್ಮಿಕ ಸ್ಥಳಗಳ ವ್ಯಾಪ್ತಿ ಬಿಟ್ಟು ಬೇರೆಡೆ ಬೋರ್ ವೆಲ್ ಕೊರೆಯಲು ಅನುಮತಿ ನೀಡುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಆದೇಶದಲ್ಲಿ ವಿವರಿಸಿದ್ದಾರೆ.

ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಬಹುತೇಕ ಶಾಸಕರು ನಗರದ ಜನರ ಹಿತದಿಂದ ಬೋರ್ ವೆಲ್ ನಿಷೇಧ ಆದೇಶ ಹಿಂಪಡೆಯುವ ಬಗ್ಗೆ ಒಕ್ಕೊರಲಿನ ಒತ್ತಡ ಹೇರಿದ್ದರು. ಅದರಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆ ನಿರ್ಣಯದ ಪ್ರಕಾರ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.| ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ

ನಗರದಲ್ಲಿ ಬೋರ್ ವೆಲ್ ಕೊರೆಯುವಿಕೆ ನಿಷೇಧಿಸಿದ್ದರಿಂದ ಜನರಿಗೆ ತೊಂದರೆಯಾಗಿತ್ತು. ಇದರೊಟ್ಟಿಗೆ ಬೋರ್ ವೆಲ್ ಮಾಫಿಯಾ ಸಹ ತಲೆ ಎತ್ತಿತ್ತು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿಷೇಧ ಆದೇಶ ವಾಪಸ್ಗೆ ನಿರಂತರ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಪ್ರಸ್ತಾಪಿಸಿರುವೆ. ಇದಕ್ಕೆ ಆಡಳಿತ ಸ್ಪಂದಿಸಿ ಜನಹಿತ ಕಾಪಾಡಿದೆ.| ರಹೀಮ್ ಖಾನ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net