ಬೋರ್ ವೆಲ್ ಡ್ರಿಲ್ ನಿಯಮ ಸಡಿಲಗೊಳಿಸಲು ಒತ್ತಾಯ

borewell
Published on

ಬೀದರ್: ಬೀದರ್ ನಗರದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಲು ಅನುಮತಿ ನೀಡಲು ವಿಧಿಸಿದ ನಿಬಂಧನೆ, ನಿಯಮ ಸಡಿಲಗೊಳಿಸಲು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಗ್ರಹಿಸಿದೆ.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಮನವಿ ಸಲ್ಲಿಸಿದ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಕಾರ್ಯದರ್ಶಿ ಡಾ. ವಿರೇಂದ್ರ ಶಾಸ್ತ್ರಿ, ನಗರದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಲು ನಾಲ್ಕೈದು ವರ್ಷಗಳಿಂದ ನಿಷೇಧವಿತ್ತು. ಸಾರ್ವಜನಿಕರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಮನವಿಗಳಿಗೆ ಸ್ಪಂದಿಸಿ ಇತ್ತೀಚೆಗೆ ಕೊಳವೆಬಾವಿ ಕೊರೆಸಲು ಜಿಲ್ಲಾಡಳಿತ ಅನುಮತಿ ನೀಡಿರುವುದು ಸ್ವಾಗತಾರ್ಹ. ಆದರೆ ಕಠಿಣ ನಿಬಂಧನೆಗಳನ್ನು ಹಾಕಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಹೊಸ ಕೊಳವೆಬಾವಿ ಕೊರೆಸಲು ಅನುಮತಿ ಕೋರಿ ಅರ್ಜಿ ಶುಲ್ಕಕ್ಕೆ ರೂ. 5 ಸಾವಿರ ಪಾವತಿ, ಅರ್ಜಿಯೊಂದಿಗೆ ಕಡ್ಡಾಯ ಜಾಗದ ದಾಖಲಾತಿ ಸಲ್ಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೃಷಿಯೇತರ ಭೂಮಿಗೆ ಅನುಮೋದನೆ ನೀಡಿದ ಜಾಗಗಳಿಗೆ ಮಾತ್ರ ಅನುಮತಿ, ನಗರಸಭೆಗೆ ಪಾವತಿಸಬೇಕಾದ ಎಲ್ಲ ಶುಲ್ಕ ಹಾಗೂ ತೆರಿಗೆ ಪಾವತಿಸುವುದು, ನಿರಂತರ ನೀರು ಸರಬರಾಜು ವ್ಯವಸ್ಥೆ ಇರದ ಪ್ರದೇಶಗಳಲ್ಲಿ, ಹೊಸದಾಗಿ ಕೊರೆಯುವ ಕೊಳವೆಬಾವಿಗೆ ಕಡ್ಡಾಯ ಮಳೆ ನೀರು ಕೊಯ್ಲು ಅಳವಡಿಸುವುದು ಸೇರಿ ಇತ್ಯಾದಿ ಷರತ್ತು ಹಾಕಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಷರತ್ತುಗಳನ್ನು ಪುನಃ ಪರಿಶೀಲಿಸಿ ಈ ಮೊದಲು ಕೊಳವೆಬಾವಿ ಕೊರೆಯಲು ಇದ್ದಿರುವ ನಿಯಮಗಳು ಮುಂದುವರೆಸಿ ಕರೊನಾದ ಎರಡನೇ ಅಲೆ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net