

ಬೋರಗಾಂವ: ತೀವ್ರ ಪೈಪೋಟಿ ಹಾಗೂ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಬೋರಗಾಂವ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು, 17 ಸದಸ್ಯರ ಪೈಕಿ ಎಂಎಲ್‌ಸಿ ಲಖನ್ ಜಾರಕಿಹೊಳಿ ಅವರ ಆಪ್ತ ಉತ್ತಮ ಪಾಟೀಲ ಸಮ್ಮುಖದ ಪಕ್ಷೇತರ ಗುಂಪಿನ ನಗರ ವಿಕಾಸ್ ಪ್ಯಾನಲ್‌ನ 16 ಅಭ್ಯರ್ಥಿಗಳು ಅಭೂತಪೂರ್ವ ಜಯ ಸಾಧಿಸಿದ್ದಾರೆ. ಪರಿವರ್ತನ ಪ್ಯಾನಲ್‌ನ ಓರ್ವ ಅಭ್ಯರ್ಥಿ ಜಯಸಾಧಿಸಿದ್ದಾರೆ.
ಬಿಜೆಪಿಯಿಂದ 16 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು, ಆದರೆ, ಯಾವುದೇ ಅಭ್ಯರ್ಥಿ ಗೆಲುವಿನ ನಗೆ ಬೀರಿಲ್ಲ. ಒಟ್ಟಾರೆ ಬಿಜೆಪಿಗೆ ಹೀನಾಯ ಸೋಲಾಗಿದೆ. ಈ ಮೂಲಕ ನಿಪ್ಪಾಣಿ ತಾಲೂಕಿನಲ್ಲಿ ತಮ್ಮ ಹಿಡಿತ ಸಾಧಿಸಿದ್ದ ಜೊಲ್ಲೆ ದಂಪತಿಗೆ ತೀವ್ರ ಮುಖಭಂಗವಾಗಿದೆ.
ನಿಪ್ಪಾಣಿ ನಗರದ ಜಿ.ಐ. ಬಾಗೆವಾಡಿ ಮಹಾವಿದ್ಯಾಲಯದಲ್ಲಿ ಗುರುವಾರ ಬೆಳಗ್ಗೆ ಮತ ಎಣಿಕೆ ಕಾರ್ಯ ನಡೆಯಿತು. ನಿಪ್ಪಾಣಿ ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ಜರುಗಿತು. 10:30ಕ್ಕೆ ಮತ ಎಣಿಕೆ ಪೂರ್ಣವಾಯಿತು.
ವಿಜೇತರ ವಿವರ: ವಾರ್ಡ್ ನಂ.1- ಶರದ ಜಂಗಟೆ (ಪಡೆದ ಮತ-752), ವಾರ್ಡ್ ನಂ.2- ಭಾರತಿ ವಸವಾಡೆ(445), ವಾರ್ಡ್ ನಂ. 3 ಸುವರ್ಣಾ ಸೋಬಾನೆ(292), ವಾರ್ಡ್ ನಂ. 4-ವರ್ಷಾ ಮನಗುತ್ತೆ(352), ವಾರ್ಡ್ ನಂ.5 ಜಾವೇದ ಮಕಾಂದಾರ(462), ವಾರ್ಡ್ ನಂ. 6-ಪಿಂಟು ಕಾಂಬಳೆ(303), ವಾರ್ಡ್ ನಂ.7-ಪ್ರದೀಪ ಮಾಳಿ(342), ವಾರ್ಡ್ ನಂ.8 ರೋಹಿತ ಪಾಟೀಲ(358), ವಾರ್ಡ್ ನಂ. 9 ಸಂಗೀತಾ ಶಿಂಗೆ(466), ವಾರ್ಡ್ ನಂ. 10 ದಿಗಂಬರ ಕಾಂಬಳೆ(400), ವಾರ್ಡ್ ನಂ.11 ಅಭಯಕುಮಾರ ಮಗದುಮ್ಮ(234), ವಾರ್ಡ್ ನಂ.12 ತುಳಸೀದಾಸ ವಸವಾಡೆ(180), ವಾರ್ಡ್ ನಂ.13 ಅಶ್ವಿನಿ ಪವಾರ(186), ವಾರ್ಡ್ ನಂ 14 ಮಾಣಿಕ ಕುಂಬಾರ (326), ವಾರ್ಡ್ ನಂ. 15-ಗಿರಿಜಾ ವಠಾರೆ(258), ವಾರ್ಡ್ ನಂ. 16 ಶೋಭಾ ಹವಲೆ(340), ವಾರ್ಡ್ ನಂ.17 ರುಕ್ಸಾನಾ ಅಪರಾಜ(246) ಮತ ಪಡೆದು ಜಯಸಾಧಿಸಿದ್ದಾರೆ. ವಿಜೇತ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಪ್ರಮಾಣ ಪತ್ರ ನೀಡಿದರು. ಉತ್ತಮ ಪಾಟೀಲ ಗುಂಪಿನ ಕಾರ್ಯಕರ್ತರು ಗುಲಾಲು ಹಚ್ಚಿ ಸಂಭ್ರಮಿಸಿದರು.
ಹಿಡಕಲ್ ಡ್ಯಾಂ ವರದಿ: ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕಲಗುಡಿಕ್ಷೇತ್ರ ಗ್ರಾಮದ ಸದಸ್ಯ ಕಮಲವ್ವ ಚಂದ್ರಪ್ಪ ಹೆಬ್ಬಾಳ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಗಿರಿಜಾ ವೀರಭದ್ರ ಮಣಗುತ್ತಿ 335 ಮತ ಪಡೆದು ವಿಜಯ ಶಾಲಿಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಬಿ.ಎಸ್.ಮಾವಿನಕಟ್ಟಿ, ಪಿಡಿಒ ಚಂದ್ರು ಗುಡದೇರಿ ವಿಜೇತೆಗೆ ಪ್ರಮಾಣಪತ್ರ ವಿತರಿಸಿದರು.
ಬೋರಗಾಂವ ಪಟ್ಟಣದ ಮತದಾರರು ನಮ್ಮ ಮೇಲೆ ನಂಬಿಕೆ ಇಟ್ಟು 16 ಅಭ್ಯರ್ಥಿಗಳನ್ನು ಚುನಾಯಿಸಿದ್ದಾರೆ. ಮತದಾರರು ಕೊಟ್ಟ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಪಟ್ಟಣದ ಸಮಗ್ರ ಅಭಿವೃದ್ಧಿ ನಮ್ಮ ಧ್ಯೇಯ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು.
ಉತ್ತಮ ಪಾಟೀಲ ಪಕ್ಷೇತರ ನಗರ ವಿಕಾಸ ಪ್ಯಾನಲ್ ಮುಖಂಡ.