

ಕಂಪ್ಲಿ: ತಾಲೂಕಿನ ಕಣವಿ ತಿಮ್ಮಲಾಪುರ ಗ್ರಾಮದ ಅಂಚಿನ ಗುಡ್ಡದ ಬಳಿ ಎರಡು ಚಿರತೆಗಳು ಶುಕ್ರವಾರ ಸಂಜೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಸಿಬ್ಬಂದಿ ಶನಿವಾರ ಕಣವಿ ತಿಮ್ಮಲಾಪುರದ ಕಮ್ಮಾರ್ ಗುಡ್ಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಗ್ರಾಮದ ಮುಖ್ಯ ರಸ್ತೆಯ ಬಳಿ ನಾಯಿಯನ್ನು ಹಿಡಿಯಲು ಚಿರತೆ ಪ್ರಯತ್ನಿಸಿದ್ದು ಜನರ ಗಲಾಟೆಗೆ ಗುಡ್ಡದ ಕಡೆಗೆ ಓಡಿ ಹೋಗಿದೆ. ಆಗಾಗ್ಗೆ ಎರಡು ಚಿರತೆಗಳು ಸಂಜೆ ವೇಳೆ ಕಮ್ಮಾರ್ ಗುಡ್ಡದ ಕೆಳಗೆ ಪ್ರತ್ಯಕ್ಷವಾಗುತ್ತಿವೆ. ಹೊಲಗದ್ದೆಗಳಿಗೆ ಹೋಗಿ ಬರಲು ರೈತರಿಗೆ ಆತಂಕ ಉಂಟಾಗುತ್ತದೆ.
ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಬೋನು ಇರಿಸಿ ಚಿರತೆಗಳ ಸೆರೆ ಹಿಡಿದು ದೂರ ಸಾಗಿಸಬೇಕು. ಅವಘಡ ಸಂಭವಿಸಿದಲ್ಲಿ ಅರಣ್ಯ ಇಲಾಖೆ ಸೇರಿ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು. ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಬೀಟ್ ಫಾರೆಸ್ಟರ್ ರಾಘವೇಂದ್ರ ಮಾತನಾಡಿ, ಕಣವಿ ತಿಮ್ಮಲಾಪುರದ ಕಮ್ಮಾರ್‌ಗುಡ್ಡ ಪ್ರದೇಶ ಪರಿಸರ ಸೂಕ್ಷ್ಮ ವಲಯ(ಇ.ಎಸ್.ಝಡ್)ಕ್ಕೆ ಸೇರಿದ್ದು, ಕರಡಿ ಧಾಮ ವ್ಯಾಪ್ತಿಯಲ್ಲಿದೆ.
ಚಿರತೆಗಳ ಚಲನವಲನ ಪರಿಶೀಲಿಸಿ ಮಾಹಿತಿಯನ್ನು ಹೊಸಪೇಟೆಯ ಪ್ರಾದೇಶಿಕ ಅರಣ್ಯ ವಲಯದ ಹಿರಿಯ ಅಧಿಕಾರಿಗಳ ಗಮನಕ್ಕೆ, ಕರಡಿಧಾಮದ ಅಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದರು. ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ಗ್ರಾಮಸ್ಥ ಪಲ್ಲೇದ ಹುಲುಗಪ್ಪ, ಡಿ.ವೈ.ಆರ್.ಎಫ್ ವೀರೇಶ ಇತರರಿದ್ದರು.