ಬೋನಿನಲ್ಲಿ ಸೆರೆಯಾದ ಗಂಡು ಚಿರತೆ

22arsph1ep.
ಅರಸೀಕೆರೆ ತಾಲೂಕಿನ ಸಂಕೋಡನಹಳ್ಳಿ ಗ್ರಾಮದ ಹಂದಿ ಮರಟಿ ಸರಹದ್ದಿನಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿರುವುದು.
Published on

ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿ ಸಂಕೋಡನಹಳ್ಳಿ ಗ್ರಾಮದ ಹಂದಿಮರಟಿ ಸರಹದ್ದಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಲಾಗಿದ್ದ ಬೋನಿಗೆ ಐದು ವರ್ಷದ ಗಂಡು ಚಿರತೆ ಸೋಮವಾರ ಮಂಜಾನೆ ಬಿದ್ದಿದೆ.

ಕಳೆದ ಕೆಲ ತಿಂಗಳಿನಿಂದ ಮೇಕೆ, ಕರುಗಳನ್ನು ತಿಂದು ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜನ, ಜಾನುವಾರುಗಳ ರಕ್ಷಣೆಗೆ ಮುಂದಾಗುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಚಿರತೆಯ ಜಾಡು ಹಿಡಿದಿದ್ದ ವಲಯ ಅರಣ್ಯಾಧಿಕಾರಿ ಅಮಿತ್ ಹಾಗೂ ಮತ್ತವರ ಸಿಬ್ಬಂದಿ ಸೆರೆಗೆ ಬೋನು ಇರಿಸಿದ್ದರು. ಆಹಾರ ಅರಸಿ ಬಂದಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು, ಸ್ಥಳೀಯರು ನಿಟ್ಟುಸಿರುವ ಬಿಡುವಂತೆ ಮಾಡಿದೆ.

ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದು ಕಲ್ಲನಾಯ್ಕನಹಳ್ಳಿ, ಕಾಟೀಕೆರೆ ಸೇರಿ ಕೆಲ ಸುತ್ತಮುತ್ತಲ ಗ್ರಾಮಸ್ಥರು ದೌಡಾಯಿಸಿ ಕುತೂಹಲದಿಂದ ಚಿರತೆ ನೋಡುತ್ತಿದ್ದ ದೃಶ್ಯ ಕಂಡು ಬಂದಿತು. ಸದ್ಯ ಚಿರತೆಯನ್ನು ರಕ್ಷಿತಾರಣ್ಯಕ್ಕೆ ರವಾನಿಸುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೆರಡು ಚಿರತೆಗಳಿರುವ ಸುಳಿವು ದೊರೆತಿದ್ದು, ಬೋನು ಇರಿಸಿ ಕಾರ್ಯಾಚರಣೆ ನಡೆಸುವಂತೆ ಗ್ರಾಪಂ ಸದಸ್ಯ ಮಂಜುನಾಥ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net