ಬೋನಿಗೆ ಬಿದ್ದ ನಾಲ್ಕನೇ ಚಿರತೆ

IMG_20241022_063642
Published on

ಎಚ್.ಡಿ.ಕೋಟೆ: ಪಟ್ಟಣದ ಡ್ರೈವರ್ ಕಾಲನಿ ಸಮೀಪದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಮಂಗಳವಾರ ನಾಲ್ಕನೇ ಚಿರತೆ ಸೆರೆಯಾಗಿದೆ.

ಎಂಟು ವರ್ಷದ ಗಂಡು ಚಿರತೆ ಮಂಗಳವಾರ ಬೆಳಗಿನ ಜಾವ ಸೆರೆಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಚಿರತೆಗಳು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೆರೆಯಾಗಿದ್ದು, ಮತ್ತಷ್ಟು ಚಿರತೆಗಳು ಇರುವ ಆತಂಕ ಪಟ್ಟಣದ ಜನರಲ್ಲಿ ಮನೆ ಮಾಡಿದೆ.

ಪಟ್ಟಣದಲ್ಲಿ ಚಿರತೆಗಳ ಹಾವಳಿ ಜಾಸ್ತಿಯಾಗಿ ರೈತರ ಜಮೀನುಗಳಲ್ಲಿ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬೋನು ಇರಿಸಲಾಗಿತ್ತು. ಅರಣ್ಯ ಇಲಾಖೆ ರೈತ ಗುರುಮಲ್ಲು ಅವರ ಜಮೀನಿನಲ್ಲಿ ಇರಿಸಿದ್ದ ಬೋನಿಗೆ ಸೆ.25ರಂದು ಏಳು ವರ್ಷದ ಗಂಡು ಚಿರತೆ ಸೆರೆಯಾಗಿತ್ತು. ಅ.4 ರಂದು ಏಳು ವರ್ಷದ ಮತ್ತೊಂದು ಗಂಡು ಚಿರತೆ ಸೆರೆಯಾಗಿತ್ತು. ಅ.16 ರಂದು ಎಂಟು ವರ್ಷದ ಚಿರತೆ ಸೆರೆಯಾಗಿತ್ತು. ಮೂರು ಚಿರತೆಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟು, ಸಾರ್ವಜನಿಕರ ಒತ್ತಾಯದ ಮೇರೆಗೆ ಮತ್ತೆ ಅದೇ ಜಮೀನಿನಲ್ಲಿ ಬೋನು ಇರಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ ಮೂರು ವರ್ಷದ ಚಿರತೆ ಬೋನಿಗೆ ಸೆರೆಯಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಆರ್‌ಎಫ್‌ಒ ಪೂಜಾ, ಡಿಆರ್‌ಎಫ್ ಪರಮೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಚಿರತೆಯನ್ನು ನಾಗರಹೊಳೆ ಉದ್ಯಾನಕ್ಕೆ ಬಿಡಲು ತಯಾರಿ ನಡೆಸಿದರು. ನಾಲ್ಕನೇ ಚಿರತೆ ಸೆರೆಯಾದ ವಿಚಾರ ತಿಳಿದು ಪಟ್ಟಣ ಸೇರಿದಂತೆ ತೊರವಳ್ಳಿ, ಬೆಳಗನಹಳ್ಳಿ, ಶಾಂತಿಪುರ ಸೇರಿದಂತೆ ಸುತ್ತಮುತ್ತಲಿನ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಚಿರತೆ ನೋಡಲು ತಂಡೋಪ ತಂಡವಾಗಿ ಆಗಮಿಸಿ ವೀಕ್ಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net