ಬೋನಿಗೆ ಬಿದ್ದ ಗಂಡು ಚಿರತೆ

20hgr1 cheeta
Published on

ಹಲಗೂರು ಸಮೀಪ ಅರಣ್ಯ ಇಲಾಖೆ ಕಾರ್ಯಾಚರಣೆ

ಹಲಗೂರು: ಜೂಗನಹಳ್ಳಿ ಗ್ರಾಮದ ಜಮೀನಿನ ಸಮೀಪ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬುಧವಾರ ಬೆಳಗಿನ ಜಾವ ಚಿರತೆ ಸೆರೆ ಸಿಕ್ಕಿದೆ.

ಹಲಗೂರು ಸೇರಿದಂತೆ ಬಾಳೆಹೊನ್ನಿಗ, ಜೂಗನಹಳ್ಳಿ , ಬೆನಮನ ಹಳ್ಳಿ , ಲಿಂಗಪಟ್ಟಣ ಗ್ರಾಮಗಳಲ್ಲಿ ರೈತರ ಸಾಕು ಪ್ರಾಣಿಗಳ ಮೇಲೆ ರಾತ್ರಿ ವೇಳೆ ಚಿರತೆ ದಾಳಿ ಮಾಡುವ ಪ್ರಕರಣ ಹೆಚ್ಚಾಗಿತ್ತು. ಇದರಿಂದ ಗ್ರಾಮಸ್ಥರ ಭೀತಿ ಹೆಚ್ಚಾಗಿತ್ತು.

ಆಡು, ಕುರಿ, ಹಸು ಮತ್ತು ಸಾಕು ನಾಯಿಗಳ ಮೇಲೆ ದಾಳಿ ಮಾಡಿದ್ದ ಚಿರತೆ, ಈ ಭಾಗದ ರೈತರಿಗೆ ಸಾಕಷ್ಟು ನಷ್ಟ ಉಂಟು ಮಾಡಿತ್ತು. ಹಾಗಾಗಿ ಚಿರತೆಯನ್ನು ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜೂಗನಹಳ್ಳಿ ಗ್ರಾಮದ ವೆಂಕಟೇಶ್ವರ ಎಂಬುವರ ಜಮೀನಿನಲ್ಲಿ ಚಿರತೆ ಹಿಡಿಯುವುದಕ್ಕಾಗಿ ಬೋನಿನೊಳಗೆ ಸಾಕು ಪ್ರಾಣಿಯನ್ನು ಕಟ್ಟಿ ಬಿಟ್ಟಿದ್ದರು. ಬುಧವಾರ ಬೆಳಗಿನ ಜಾವ ಬೇಟೆಯಾಡಲು ಬಂದ 3 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ. ವೈದ್ಯಕೀಯ ತಪಾಸಣೆ ನಂತರ ಉನ್ನತಾಧಿಕಾರಿಗಳ ಆದೇಶದಂತೆ ನಾಗರಹೊಳೆ ಅಥವಾ ಬಂಡಿಪುರ ಅಭಯಾರಣ್ಯಕ್ಕೆ ಚಿರತೆಯನ್ನು ರವಾನೆ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಬೋನಿನಲ್ಲಿ ಸೆರೆ ಸಿಕ್ಕಿರುವ ಚಿರತೆ ನೋಡಲು ಗ್ರಾಮಸ್ಥರು ಜಮಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net