

ಹಿರೀಸಾವೆ: ಹೋಬಳಿಯ ಮಾಚಬೂವನಹಳ್ಳಿ(ಕಾವಲು ಬೋರೆ) ಗ್ರಾಮದ ಬಳಿ ತೋಟದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸುಮಾರು 5 ರಿಂದ 6 ವರ್ಷದ ಗಂಡು ಚಿರತೆ ಮಂಗಳವಾರ ರಾತ್ರಿ ಸೆರೆಯಾಗಿದೆ.
ಕಳೆದ 15-20 ದಿನಗಳಿಂದ ಗ್ರಾಮದ ಹೊರವಲಯ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ರಾತ್ರಿ ವೇಳೆ ಊರಿನೊಳಗೆ ನುಗ್ಗಿ ನಾಯಿಗಳ ಮೇಲೆ ದಾಳಿ ಮಾಡಿ ಹೊತ್ತೊಯ್ಯುತಿತ್ತು. ಇದರಿಂದ ಆತಂಕಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು.
ಚಿರತೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರದೇಶವನ್ನು ಪರಿಶೀಲಿಸಿ ಅಲ್ಲಿ ಬೋನು ಅಳವಡಿಸಿದ್ದರು. ಮಂಗಳವಾರ ರಾತ್ರಿ ಬೋನಿಗೆ ಬಿದ್ದಿದೆ. ಬುಧವಾರ ಮುಂಜಾನೆ ಜಮೀನಿಗೆ ತೆರಳಿದ್ದ ರೈತರು ಇದನ್ನು ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಬೋನು ಸಮೇತ ಚಿರತೆಯನ್ನು ಗುಲಸಿಂದ ಸಸ್ಯ ಕ್ಷೇತ್ರಕ್ಕೆ ಸಾಗಿಸಲಾಗಿದೆ. ಚಿರತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಪಲ್ಲವಿ ತಿಳಿಸಿದರು.