

ಚಾಮರಾಜನಗರ: ಬೋಧನೆಯಲ್ಲಿ ದೋಷವಿಲ್ಲ, ಬೋಧನೆಗೆ ತಕ್ಕಂತೆ ಬಾಳದಿರುವುದರಲ್ಲಿ ದೋಷವಿದ್ದು, ಪ್ರಸ್ತುತ ಬೋಧಕ ವರ್ಗದಲ್ಲಿ ಔದಾರ್ಯದ ಕೊರತೆ ಕಾಣುತ್ತಿದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಲಹೆಗಾರರು ಹಾಗೂ ಸಂಸ್ಕೃತಿ ಚಿಂತಕ ಡಾ.ಎಸ್.ತುಕಾರಾಂ ವಿಷಾದ ವ್ಯಕ್ತಪಡಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಚೇತನ ಕಲಾವಾಹಿನಿ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಮಹೇಶ್ ಹರವೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಪಾಠ ಮಾಡುವ ಬೋಧಕರಲ್ಲಿ ಔದಾರ್ಯತೆ ಮತ್ತು ಗ್ರಹಿಸುವ ಕೊರತೆಯನ್ನು ನಾನು ಕಾಣುತ್ತಿದ್ದೇನೆ. ವಿಭಿನ್ನ ಅಭಿರುಚಿಯ ಮತ್ತು ಎಲ್ಲ ಮಕ್ಕಳನ್ನು ಒಳಗೊಂಡು ಬೋಧನೆ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಇದು ಮುಂದುವರಿದರೆ ಜಾತಿ, ಧರ್ಮ, ಅಸಮಾನತೆ, ತಾರತಮ್ಯ ಮತ್ತು ಇನ್ನಿತರೆ ಸಂಘರ್ಷಗಳಿಗೆ ನಮ್ಮ ಮಕ್ಕಳನ್ನು ದೂಡಬೇಕಾಗುತ್ತದೆ. ಶಿಕ್ಷಣವಂತ ಸಮುದಾಯದವರ ಮನಸ್ಸಿನಲ್ಲಿ ತಾರತಮ್ಯ ಇರಬಾರದು. ಅದನ್ನು ಶಿಕ್ಷಕ ವರ್ಗ ಅರಿತುಕೊಂಡು ಸಾಗಬೇಕಿದೆ ಎಂದರು.
ಜಿಲ್ಲೆಯ ಜಾನಪದ ಮತ್ತು ದಾರ್ಶನಿಕರ ಪರಂಪರೆ ಜಗತ್ತಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಕನ್ನಡ ತನ ಮೆರೆದ ಅನೇಕ ಪ್ರತಿಭಾವಂತರು ಈ ನೆಲದಲ್ಲಿ ಜನಿಸಿದ್ದಾರೆ. ಮಲೆ ಮಹದೇಶ್ವರ, ಮಂಟೇಸ್ವಾಮಿ ಜಾನಪದ ಕಾವ್ಯಗಳು, ಅನೇಕ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು ಹಾಗೂ ಇನ್ನಿತರೆ ಸಾಧಕರು ಈ ಜಿಲ್ಲೆಯನ್ನು ಜಾನಪದ ನಾಡೋಜ ಸೀಮೆಯಾಗಿಸಿದ್ದಾರೆ. ಅಂತಹ ಹಾದಿಯಲ್ಲೇ ಸಾಗುತ್ತಿರುವ ಸಾಹಿತಿ ಮಹೇಶ್ ಹರವೆ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ ಬಂದಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ಹೇಳಿದರು.
ಕನ್ನಡ ಶಿಕ್ಷಕರ ಕಾರಣಕ್ಕೆ ಮನುಷ್ಯತ್ವ ಇಂದಿಗೂ ಜೀವಂತವಾಗಿದೆ. ಅಂತಹ ಸಾಲಿನಲ್ಲಿ ನಿಲ್ಲುವ ಮಹೇಶ್ ಅವರ ಸಾಹಿತ್ಯ ಭಾವನೆ, ಸಂವೇದನೆ, ನಿರಾಳದೆಡೆಗೆ ಪಾದ ಬೆಳೆಯುವಂತೆ ಮಾಡುತ್ತದೆ. ನಿರ್ಲಕ್ಷ್ಯಕ್ಕೆ ಒಳಗಾದ ಜ್ಞಾನ ಪರಂಪರೆಯನ್ನು ಬರವಣಿಗೆಯ ಮೂಲಕ ಜೀವಂತಗೊಳಿಸಿದ್ದಾರೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಧ್ಯಾಪಕ ಡಾ.ಟಿ.ಪದ್ಮಶ್ರೀ ಮಾತನಾಡಿ, ವೈಚಾರಿಕ ಮತ್ತು ವೈಜ್ಞಾನಿಕ ಜನಪರ ಪರಂಪರೆಯ ಬಗ್ಗೆ ಆಸಕ್ತಿಯನ್ನು ಹೊಂದಿರುವ ಮಹೇಶ್ ಹರವೆ ಅವರು ಬುದ್ಧ ಗುರುವಿನ ಜ್ಞಾನ ಮಾರ್ಗದಲ್ಲಿ ನಡೆದ ಕಾರಣಕ್ಕಾಗಿ ಅವರಿಗೆ ಇಂತಹ ಪ್ರಶಸ್ತಿ ಒಲಿದು ಬಂದಿದೆ. ಈ ಸಮಾಜ ಯಾವುದನ್ನು ಕಡೆಗಣಿಸಿತ್ತೋ, ಅದಕ್ಕೆ ಮೌಲ್ಯ ತಂದುಕೊಡುವ ಕೆಲಸವನ್ನು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಮುನಿರಾಜು, ತೆರಕಣಾಂಬಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಿ.ಲಿಂಗಯ್ಯ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸೋಮಣ್ಣ, ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಮಹದೇವಪ್ರಭು, ಚೇತನ ಕಲಾವಾಹಿನಿ ಅಧ್ಯಕ್ಷ ರಾಜಪ್ಪ ರಾಮಸಮುದ್ರ, ಕಾರ್ಯದರ್ಶಿ ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.