ಬೋಗಸ್ ಗ್ಯಾರಂಟಿ ವಿರುದ್ಧ ಹೋರಾಟ

2 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರದ ಬೋಗಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ಹಣ ನೀಡಬೇಕು. ಇಲ್ಲವೇ ಜನರ ಕ್ಷಮೆ ಕೇಳಬೇಕು. ಕೇಂದ್ರದಿಂದ 5 ಕೆಜಿ ಅಕ್ಕಿ ಕೊಡುತ್ತಿದೆ ಎಂಬ ಸತ್ಯವನ್ನು ಹೇಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ರೇಣುಕಾಚಾರ್ಯ ನೋಟೀಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಜೋಶಿ, ಪಕ್ಷದ ರಾಜ್ಯಾಧ್ಯಕ್ಷರ ಅಧ್ಯಕ್ಷತೆ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಬಿಎಸ್‌ವೈ ರೇಣುಕಾಚಾರ್ಯ ಜತೆಗೆ ಮಾತನಾಡಿದ್ದಾರೆ. ನಾನು ಸಹ ಮಾತನಾಡುವೆ. ನಮ್ಮದು ಒಂದು ಪರಿವಾರ ಇದ್ದಂತೆ ಎಂಬುದನ್ನು ಮನವರಿಕೆ ಮಾಡಿಕೊಡುವೆ. ಸ್ವಲ್ಪ ಆಕ್ರೋಶದಲ್ಲಿ ಕೆಲವರು ಮಾತನಾಡಿದ್ದರು. ಪಕ್ಷದ ಮೇಲೆ ಯಾರಿಗೂ ಬೇಸರವಿಲ್ಲ. ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ಸೂಚಿಸಲಾಗಿದೆ ಎಂದರು.
ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಕಲ್ಲೆಸೆದಿದ್ದು ವಿಕೃತ ಮನೋಭಾವ ಬಿಂಬಿಸುತ್ತದೆ. ದೇಶದ ಅನೇಕ ಭಾಗದಲ್ಲಿ ಈ ರೀತಿ ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವಂದೇ ಭಾರತ ರೈಲು ದೇಶದ ಆಸ್ತಿ. ದೇಶದಲ್ಲಿ ಆಧುನಿಕ ಸೌಲಭ್ಯ ಬೆಳೆಯಲು ಈ ರೈಲು ಆಗಿದೆ. ರೈಲುಗಳು ಭಾರತದಲ್ಲಿ ತಯಾರಾಗಬೇಕೆಂಬುದು ಪ್ರಧಾನಿ ಮೋದಿ ಕಾಳಜಿಯಾಗಿದೆ. ಕಿಡಿಗೇಡಿಗಳು ರಸ್ತೆ ಪಕ್ಕಕ್ಕೆ ನಿಂತು ಕಲ್ಲು ಎಸೆಯುತ್ತಿದ್ದಾರೆ. ಹೀಗಾಗಿ ರೈಲಿನ ಒಳಗೆ ಇದ್ದವರಿಗೆ ಅವರು ಯಾರೆಂದು ತಿಳಿಯುವುದಿಲ್ಲ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net