

ಚಿತ್ರದುರ್ಗ: 3 ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಆಗಿನ ರಾಜ್ಯ ಸರ್ಕಾರ ಕರೊನಾ ವೇಳೆ ಡಿಬಿಟಿ ಮೂಲಕ ಸೌಲಭ್ಯ ನೀಡಿತು. ಇದನ್ನು ಪಡೆಯಲು ಅನರ್ಹರ ಸಂಖ್ಯೆ ಹೆಚ್ಚಾಯಿತು. ಹೀಗಾಗಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 45 ಲಕ್ಷ ಕಾರ್ಡ್ ನೋಂದಣಿಯಾಗಿವೆ. ಶೇ 40ಕ್ಕಿಂತ ಹೆಚ್ಚು ಬೋಗಸ್ ಕಾರ್ಡ್ ರದ್ದಾಗಲಿವೆ. ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7 ಲಕ್ಷ ಮಂದಿಗೆ ಸೌಲಭ್ಯ: ಮಂಡಳಿಯ ಸ್ಕಾಲರ್‌ಶಿಪ್ ಸೌಲಭ್ಯಕ್ಕೆ ರಾಜ್ಯದಲ್ಲಿ 13 ಲಕ್ಷ ಅರ್ಜಿ ಬಂದಿವೆ. ಇದರಲ್ಲೂ ಬೋಗಸ್ ಹೆಚ್ಚಾಗಿದ್ದು, ಅನರ್ಹರಿಗೂ ನೀಡಿದರೆ, ಎರಡೇ ವರ್ಷದಲ್ಲಿ ಮಂಡಳಿ ಮುಚ್ಚಬೇಕಾಗುತ್ತದೆ. ಅರ್ಹ 7 ಲಕ್ಷ ಮಂದಿಗೆ ಮುಂಬರುವ ದಿನಗಳಲ್ಲಿ ಸೌಲಭ್ಯ ಸಿಗಲಿದೆ. ಸೆಸ್ ಕೂಡ ಕುಂಠಿತವಾಗಿದ್ದು, 2008ರಿಂದ ಕೇಂದ್ರ ರಾಜ್ಯದ ಪಾಲು ನೀಡಿಲ್ಲ. ನ್ಯಾಯಯುತವಾಗಿ ಮಂಡಳಿಗೆ ಬರಬೇಕಾದ ಸೆಸ್ ಸಂಗ್ರಹಿಸಲಾಗುವುದು. ಬಾಲಕಾರ್ಮಿಕರನ್ನು ಬಳಸಿಕೊಂಡವರ ವಿರುದ್ಧ ಕ್ರಮ, ಅಂತಹ ಮಕ್ಕಳಿಗೆ 18 ವರ್ಷದವರೆಗೂ ಉಚಿತ ಶಿಕ್ಷಣ ಕೊಡಿಸಲು ಸರ್ಕಾರ ಬದ್ಧವಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಜಿ.ಎಸ್.ಮಂಜುನಾಥ್, ಕೃಷ್ಣಮೂರ್ತಿ, ಸಂಪತ್‌ಕುಮಾರ್, ಕೆ.ಸಿ.ನಾಗರಾಜ್ ಇತರರಿದ್ದರು.