

ಕೊಪ್ಪ: ಬೊಮ್ಲಾಪುರ ಪ್ರೌಢಶಾಲೆ ವಿದ್ಯಾರ್ಥಿಗಳು ಶಿಕ್ಷಕರಾದ ವೀಣಾಶಾಸ್ತ್ರಿ ಮಾರ್ಗದರ್ಶನದಲ್ಲಿ ಗಡಿಕಲ್ಲನ್ನು ಸಂರಕ್ಷಿಸುವ ಮೂಲಕ ಅವುಗಳ ಉಳಿವಿಗಾಗಿ ಶ್ರಮಿಸಿದ್ದಾರೆ.
ಶಿಲ್ಪಗಳನ್ನು ಅಧ್ಯಯನ ಮಾಡಿರುವ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅವರು ಅಧ್ಯಯನ ಮಾಡಿದ್ದಾರೆ. ಶಿಲ್ಪವು ಗಡಿಕಲ್ಲಾಗಿದ್ದು ಹದಿನೈದನೇ ಶತಮಾನದ ಕಾಲಮಾನಕ್ಕೆ ಸೇರಿದ್ದಾಗಿದೆ. ಇದು ವಾಮನಮುದ್ರೆ ಕಲ್ಲಾಗಿದ್ದು ಕೈಯಲ್ಲಿ ಕಮಂಡಲ ಮತ್ತು ಛತ್ರಿ ಹಿಡಿದಿರುವ ಕೆತ್ತನೆ ಇದೆ. ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ವಿಜಯನಗರ ಅರಸರ ಕಾಲಕ್ಕೆ ಸೇರಿದ್ದು, ಎರಡನೇ ಹರಿಹರನ ಆಡಳಿತದ ಕಾಲ. ಶಕ ವರುಷ 1325ರಂದು (ಸಾಮಾನ್ಯ ಶಕ ವರ್ಷ 1403, ನ.13 ಮಂಗಳವಾರ ) ಆರಗದ ವೇಂಠೆಯ ಹದಿನೆಂಟು ಕಂಪಣದ ಸಮಸ್ತ ನಾಡು ಮೂರು ಪಟ್ಟಣದ ಸಮಸ್ತರು ಸರ್ವಾನುಮತದಿಂದ ಭಾರದ್ವಾಜ ಗೋತ್ರದ ವೀರಂಣವೊಡೆಯರಿಗೆ ಕ್ರಯದಾನವಾಗಿ ಕೊಟ್ಟ ಭೂದಾನ ಶಿಲಾಶಾಸನಕ್ಕೆ ಸಂಬಂಧಿಸಿದಂತೆ ಗಡಿಯ ಗುರುತಿಗಾಗಿ ನೆಡಿಸಿದ ಗಡಿಕಲ್ಲು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕ್ಷೇತ್ರಕಾರ್ಯದಲ್ಲಿ ಮುಖ್ಯಶಿಕ್ಷಕರು, ಶಾಲಾ ಶಿಕ್ಷಕರು, ಎಸ್‌ಡಿಎಂಸಿ, ಗ್ರಾಮಸ್ಥರು ಸಹಕರಿಸಿದ್ದಾರೆ.