ಬೊಮ್ಮಾಯಿ ಬರೀ ಬುರುಡೆ ಬಿಡ್ತಾರೆ ! ; ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯ

DSC_5783
Published on

ಗುಬ್ಬಿ : ಕೋಮುವಾದಿ ಪಕ್ಷ ಅಧಿಕಾರದಿಂದ ತೊಲಗಬೇಕಿದೆ. ಆರ್‌ಎಸ್‌ಎಸ್ ಕೈ ಗೊಂಬೆಯಾದ ಮುಖ್ಯಮಂತ್ರಿ ಬೊಮ್ಮಾಯಿ ಬರೀ ಬುರುಡೆ ಬಿಡುತ್ತಾರೆ. ಹಸಿವು ನೀಗಿಸುವ ಅನ್ನಭಾಗ್ಯಕ್ಕೆ ಕತ್ತರಿ ಹಾಕುವ ಕೆಲಸ ಮಾಡುತ್ತಿರುವ ಬಿಜೆಪಿಗೆ ಹಸಿವಿನ ಬಗ್ಗೆ ತಿಳಿದಿಲ್ಲ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ಚಾಲುಕ್ಯ ಆಸ್ಪತ್ರೆ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಶಕ್ತಿಗೆ ಹುಚ್ಚು ಹಿಡಿಸಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಈಗ ಪಕೋಡಾ ಮಾರಿ ಜೀವನ ಮಾಡಲು ಹೇಳುತ್ತಿದೆ. ಆದರೆ ಅಡುಗೆ ಎಣ್ಣೆ ಬೆಲೆ ಕೇಳಿದರೆ. ಈ ಪಕೋಡಾ ಉದ್ಯೋಗವನ್ನೂ ಮಾಡಲಾಗದು ಎಂದರು.

ಕರೊನಾ ಸಂದರ್ಭದಲ್ಲಿ ಎರಡನೇ ಅಲೆಗೆ ರಾಜ್ಯದಲ್ಲಿ 4 ಲಕ್ಷ ಜನರ ಬಲಿಯಾದರು. ದೇಶದಲ್ಲಿ 50 ಲಕ್ಷ ಮಂದಿ ಮೃತಪಟ್ಟರು. ಈ ಜತೆಗೆ ಚಾಮರಾಜನಗರದಲ್ಲಿ ಅಮಾಯಕ 36 ಮಂದಿ ಸಾವಿಗೆ ಸರ್ಕಾರ ಕಾರಣವಾಯಿತು. ಈ ಘಟನೆಯನ್ನು ಮುಚ್ಚಿಹಾಕುವ ಕೆಲಸ ಸಚಿವರಾದ ಡಾ.ಸುಧಾಕರ್, ಸುರೇಶ್ ಕುಮಾರ್ ಮಾಡಿದ್ದು ಅಮಾನವೀಯ ಎಂದರು.

ಇಂತಹ ಬಿಜೆಪಿ ಸರ್ಕಾರ ಕಿತ್ತೊಗೆಯುವ ನಿಟ್ಟಿನಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಮತ್ತು ಎಂಎಲ್ಸಿ ಕಾಂತರಾಜು ಅವರು ಕಾಂಗ್ರೆಸ್ ಸೇರಬೇಕು. ಕಾಂತರಾಜು ಬರುವ ಸೂಚನೆ ನೀಡಿದ್ದಾರೆ. ಶ್ರೀನಿವಾಸ್ ಕಾಂಗ್ರೆಸ್ ಗೆ ಬರಲು ನಿರ್ಧರಿಸಲು ಜನರ ಮುಂದೆ ಬರುತ್ತಾರೆ. ಮತ್ತೊಮ್ಮೆ 5 ನೇ ಬಾರಿ ಶಾಸಕರಾಗಿ ಆಯ್ಕೆ ಮಾಡಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಮುಖಂಡರಾದ ಆರ್.ರಾಜೇಂದ್ರ, ಕೆ.ಎಂ.ರಾಮಚಂದ್ರಪ್ಪ, ಚಾಲುಕ್ಯ ಆಸ್ಪತ್ರೆ ಎಂಡಿ ಡಾ.ಮುರಳೀಧರ್, ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮೀ ಇದ್ದರು.

ಸಿದ್ದರಾಮಯ್ಯ ಪ್ರೀತಿಗೆ ನಾನು ಚಿರಋಣಿ : ಜೆಡಿಎಸ್ ಸಮಾವೇಶವು ನನ್ನ ಗೌರವ ಕಳೆದಿದ್ದಲ್ಲದೆ, ಪ್ರಾಮಾಣಿಕ ಕಾರ್ಯಕರ್ತರ ಮರ್ಯಾದೆ ಕಳೆದ ಕುಮಾರಸ್ವಾಮಿ ಅವರು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ವಾಮಾಚಾರ ಮಾಡಿ ದೇವರ ಕೈಕಾಲು ಕಟ್ಟಿ ಮನೆಯಲ್ಲಿಟ್ಟುಕೊಂಡ ಆ ಕುಟುಂಬ ಎಲ್ಲಿಗೆ ಬಂದರೂ ನಾನು ಬಂದು ಪ್ರಮಾಣ ಮಾಡುತ್ತೇನೆ, ಸುಳ್ಳು ಹೇಳಲು ಒಬ್ಬ ಗಣಿಧಣಿ ಕರೆತಂದು ಕಾರ್ಯಕ್ರಮ ಮಾಡಿ ಭಾವುಕತೆ ಕಣ್ಣೀರಿಗೆ ಗ್ಲಿಜಿರಿನ್ ಕರ್ಚಿಫ್ ಬಳಸಿದ್ದು ಎಲ್ಲರಿಗೂ ತಿಳಿದಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆಕ್ರೋಶ ಹೊರಹಾಕಿದರು. ಈ ಮೊಸಳೆ ಕಣ್ಣೀರು ಇಲ್ಲಿ ಕೆಲಸ ಮಾಡಲ್ಲ. 20 ವರ್ಷದಿಂದ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರು ಎಲ್ಲವನ್ನೂ ಗಮನಿಸಿದ್ದಾರೆ. ಇವರ ಅಂತರಂಗ ಮರ್ಮ ತಿಳಿಯಲು ಇಷ್ಟು ವರ್ಷ ಬೇಕಾಯಿತು. ಕತ್ತು ಹಿಡಿದು ನೂಕಿದ ನಂತರ ಜನರ ಮುಂದೆ ನಿಂತಿದ್ದೇನೆ. ಸಿದ್ದರಾಮಯ್ಯ ಅವರ ಆಹ್ವಾನ ಪ್ರೀತಿಗೆ ನಾನು ಚಿರಋಣಿ. ಜನರೇ ನನ್ನ ಮುನ್ನಡೆಸುತ್ತಾರೆ ಎಂದರು.

ಗುಬ್ಬಿ ಶ್ರೀನಿವಾಸ್ ಅವರಿಂದ ಜೆಡಿಎಸ್ ಬೆಳೆದಿತ್ತು. ಅವರನ್ನೇ ದೂರವಿಟ್ಟು ಸಮಾವೇಶ ಮಾಡಿದ ಕುಮಾರಸ್ವಾಮಿ ಬಗ್ಗೆ ಏನು ಹೇಳುವುದು. ಏನಾದರೂ ಮಾತನಾಡಿದರೆ ಜಾತಿ ಬಣ್ಣ ಕಟ್ಟಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ನಾನು ನಿಜವಾದ ಜಾತ್ಯತೀತ ನಿಲುವು ಉಳ್ಳವನು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net