ಬೊಮ್ಮಸಂದ್ರದಲ್ಲಿ ಕಾರ್ಮಿಕರಿಗೆ ಉಚಿತವಾಗಿ ಲಸಿಕೆ, ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್ ಹೇಳಿಕೆ, ನಾರಾಯಣ ಹೆಲ್ತ್‌ಸಿಟಿ ಸಹಭಾಗಿತ್ವ

02ank news and photos 02
Published on

ಆನೇಕಲ್: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಎಲ್ಲ ಕಾರ್ಖಾನೆಗಳ ಕಾರ್ಮಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ನಾರಾಯಣ ಹೆಲ್ತ್ ಸಿಟಿ ಸಹಭಾಗಿತ್ವದಲ್ಲಿ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್ ಹೇಳಿದರು.

ಬೊಮ್ಮಸಂದ್ರ ಕೈಗಾರಿಕಾ ಸಂಘದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗಾಗಿ ಉಚಿತ ಲಸಿಕೆ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ನಾರಾಯಣ ಹೆಲ್ತ್ ಸಿಟಿ ಮುಖ್ಯಸ್ಥ ದೇವಿಶೆಟ್ಟಿ ಅಗತ್ಯವಾದಷ್ಟು ಲಸಿಕೆಯನ್ನು ಖರೀದಿಸಿ ಕೊಟ್ಟಿದ್ದಾರೆ. ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಸಂಘದೊಂದಿಗೆ ಕೈಜೋಡಿಸಲು ಸ್ವಪ್ರೇರಣೆಯಿಂದ ಮುಂದಾಗಿದ್ದಾರೆ ಎಂದರು.

ಬುಧವಾರದಿಂದ ಆರಂಭವಾಗಿ ಪ್ರತಿದಿನ 1 ಸಾವಿರ ಕಾರ್ಮಿಕರಿಗೆ ಲಸಿಕೆ ಹಾಕಲಾಗುವುದು. ಪ್ರತಿ ಭಾಗದ ಕೈಗಾರಿಕಾ ಸಂಘಗಳು, ಕಾರ್ಖಾನೆ ಮಾಲೀಕರು, ಕಾರ್ಮಿಕರಿಗೆ ಲಸಿಕೆ ಹಾಕಿಸಿ, ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ರಾಜ್ಯದಲ್ಲೇ ಮೊದಲ ಬಾರಿಗೆ ಬೊಮ್ಮಸಂದ್ರ ಕೈಗಾರಿಕಾ ಸಂಘದಿಂದ ಕಾರ್ಮಿಕರಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದೆ. ಕರೊನಾ ನಡುವೆಯೂ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ರಕ್ಷಣೆ ಹಾಗೂ ಜವಾಬ್ದಾರಿ ಅರಿತು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಲಸಿಕೆ ಪಡೆದ ಕಾರ್ಮಿಕ ಮೂರ್ತಿ ಮಾತನಾಡಿ, ಆಸ್ಪತ್ರೆಗಳಲ್ಲಿ ಮೊದಲೇ ಜನರು ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯಲು ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂಘ ಕಾರ್ಮಿಕರು ಇರುವಲ್ಲಿಯೇ ಲಸಿಕಾ ಅಭಿಯಾನ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ನಾರಾಯಣ ಹೆಲ್ತ್ ಸಿಟಿ ಸಿಬ್ಬಂದಿ ನಾಗರಾಜ್ ಶೆಟ್ಟಿ, ಅಪೋಟೆಕ್ಸ್ ಕಾರ್ಖಾನೆಯ ನಿರ್ದೇಶಕ ಯೋಗಾಂಜನೇಯ ರೆಡ್ಡಿ, ಕೈಗಾರಿಕಾ ಸಂಘದ ಜಂಟಿ ಖಜಾಂಚಿ ರಾಜಶೇಖರ್, ವ್ಯವಸ್ಥಾಪಕ ಶಿವಕುಮಾರ್, ಮುಖಂಡರಾದ ನೀಲಕಂಠಯ್ಯ, ವಾಸು, ರಾಜು ಮಡಿಕೇರಿ, ಮಧುಸೂದನ್, ಸನ್ಸೆರಾ ರಾಜೇಶ್, ಗೋಪಾಲ್ ಸಿಂಗ್, ಹೆನ್ನಾಗರ ಗ್ರಾಪಂ ಸದಸ್ಯ ಕಿರಣ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net