ಬೊಟ್ಯತ್ನಾಡ್ ಗ್ರಾಮಸ್ಥರ ಪ್ರತಿಭಟನೆ

Published on

ಗೋಣಿಕೊಪ್ಪ: ಕೊಡವ ಸಾಂಸ್ಕೃತಿಕ ನೆಲೆಯಾಗಿರುವ ಮಂದ್ ಜಾಗದಲ್ಲಿ ಸರ್ಕಾರದ ಕುಡಿಯುವ ನೀರು ಯೋಜನೆ ಟ್ಯಾಂಕ್ ನಿರ್ಮಾಣ ಮಾಡುವುದು ಬೇಡ ಎಂದು ಬೊಟ್ಯತ್ನಾಡ್ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.


ಕುಂದ-ಮುಗುಟಿಗೇರಿ ಗ್ರಾಮದಲ್ಲಿರುವ ದೇವಮಕ್ಕಡ ಬಾಣೆ ಕೋಲ್‌ಮಂದ್ ಜಾಗದಲ್ಲಿ ಅರ‌್ವತೊಕ್ಲು ಗ್ರಾಮ ಪಂಚಾಯಿತಿ ಜಲಜೀವನ್ ಯೋಜನೆಯ ನೀರಿನ ಟ್ಯಾಂಕ್ ನಿರ್ಮಿಸಲು ಮುಂದಾಗಿರುವ ಹಿನ್ನೆಲೆ ನಾಡಿನ ಆರು ಗ್ರಾಮಗಳಿಗೆ ತಕ್ಕ-ಮುಖ್ಯಸ್ಥರು, ನಾಡಿನವರು ವಿರೋಧ ವ್ಯಕ್ತಪಡಿಸಿದರು.


ಸಾಂಸ್ಕೃತಿಕ ಕೇಂದ್ರವಾಗಿ ಹಿರಿಯರು ಕಾಯ್ದಿರಿಸಿದ್ದಾರೆ. ಇಲ್ಲಿ ಪುತ್ತರಿ ಕೋಲಾಟ್ ಸೇರಿದಂತೆ ನಮ್ಮೆಗಳಲ್ಲಿ ಸಾಂಸ್ಕೃತಿಕವಾಗಿ ಪಾಲ್ಗೊಳ್ಳಲು ಮಾತ್ರ ಅವಕಾಶವಿದೆ. ಇಲ್ಲಿ ಬೇರೆ ಯಾವ ಕಾಮಗಾರಿಗೂ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಗ್ರಾಮ ಪಂಚಾಯಿತಿ ಸದಸ್ಯರು ತಕ್ಕ-ಮುಖ್ಯಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.


ಬೊಟ್ಯತ್ನಾಡ್ ತಕ್ಕರಾದ ಅಡ್ಡಂಡ ಸಿ ಕುಶಾಲಪ್ಪ ಮಾತನಾಡಿ, ಅನಾದಿ ಕಾಲದಿಂದಲೂ ಈ ಜಾಗವನ್ನು ಸಂರಕ್ಷಿಸಿಕೊಂಡು ಬರಲಾಗಿದೆ. ಇದರ ಬಹಳಷ್ಟು ಜಾಗ ಒತ್ತುವರಿಯಾಗಿದೆ, ಇದೀಗ ಉಳಿದ ಜಾಗಕ್ಕೆ ಬೇಲಿ ಹಾಕಿ ಮುಂದಿನ ಪೀಳಿಗೆಗೆ ಈ ಕೋಲ್ ಮಂದ್‌ಗಾಗಿ ಸಂರಕ್ಷಿಸಲಾಗಿದೆ. ಕಳೆದ ವರ್ಷ ಬೇಲಿ ಹಾಕುವ ಸಮಯದಲ್ಲಿ ಈ ಮಂದ್ ಒಳಗೆ ಏಳೆಂಟು ಚೀಲ ಮದ್ಯದ ಬಾಟಲಿಗಳು ಹಾಗೂ ಇನ್ನಿತರ ಬೇಡದ ಪದಾರ್ಥಗಳ ಸಿಕ್ಕಿವೆ. ಪಂಚಾಯಿತಿ ಸದಸ್ಯರು ಜವಾಬ್ದಾರಿ ತೆಗೆದುಕೊಂಡಿರಲಿಲ್ಲ. ಮಂದ್ ಒಳಗೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಹೇಳಿದರು.


ಕುಂದ-ಮುಗುಟಿಗೇರಿ ಗ್ರಾಮದ ಪ್ರಮುಖರಾದ ಕೊಡಂದೇರ ಬಾಂಡ್ ಗಣಪತಿ, ತೀತಮಾಡ ಎಂ ಉತ್ತಪ್ಪ, ಅಚ್ಚಿಯಂಡ ಬೋಸು, ಕೊಡಂದೇರ ಎಂ ಸುಬ್ಬಯ್ಯ, ಮನೆಯಪಂಡ ಅನಿಲ್, ಚಮ್ಮಟೀರ ಸುಗುಣ ಮುತ್ತಣ್ಣ, ಕಾಡ್ಯಮಾಡ ಪೂಣಚ್ಚ, ಸಣ್ಣುವಂಡ ಪೂಣಚ್ಚ, ಚಮ್ಮಟೀರ ಪ್ರವೀಣ್ ಉತ್ತಪ್ಪ, ತೀತಮಾಡ ಎಸ್. ಗಣಪತಿ, ಕಾಡ್ಯಮಾಡ ನವೀನ್, ಕೊಡಂದೇರ ಪವನ್, ಮೂಕಳೇರ ಬಿ ರಮೇಶ್, ಗುಮ್ಮಟೀರ ದರ್ಶನ್ ನಂಜಪ್ಪ, ಗುಮ್ಮಟೀರ ಚೆಂಗಪ್ಪ, ಗುಮ್ಮಟೀರ ಕೌಶಿಕ್, ಕೆ. ಟಿ ಕರುಂಬಯ್ಯ, ಡಿ.ಬಿ ಪೂಣಚ್ಚ, ಎಂ.ಪಿ ವಿನು, ಎಸ್.ವಿ ರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net