ಬೊಗಳುವ ಪ್ರಾಣಿ ಹುಲಿಯಲ್ಲ: ಯತ್ನಾಳ ವಿರುದ್ದ ಕರವೇ ಅಧ್ಯಕ್ಷ‌ ಮುಲ್ಲಾ ವ್ಯಂಗ್ಯ

20201203_103422
Published on

ವಿಜಯಪುರ: ಬೊಗಳುವ ಪ್ರಾಣಿ ಹುಲಿಯಲ್ಲ, ಹುಲಿ ಹುಲಿ ಎಂದು ಬಿಲ್ಡಪ್ ತೆಗೆದುಕೊಳ್ಳುವ ಪ್ರಾಣಿಯನ್ನು ಕಾಡಿನಲ್ಲಿ ಬಿಟ್ಟು ಬರಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಕಿಡಿ ಕಾರಿದ್ದಾರೆ.

ಬಸನಗೌಡ ಪಾಟೀಲ ಉತ್ನಾಳರಿಗೆ ಕರವೇ ಕಂಡರೆ ಭಯ. ಅದಕ್ಕಾಗಿಯೇ ಬಂದ್ ವಿಫಲಗೊಳಿಸುವ ಶತಪ್ರಯತ್ನ ನಡೆಸಿದ್ದಾರೆ. ಬಂದ್ ಹಿನ್ನೆಲೆ ಇದೇ‌ ಮೊದಲ ಬಾರಿಗೆ ಸಭೆ ಕರೆದು ವ್ಯಾಪಾರ ಸ್ಥರಿಗೆ ಭಯ ಹುಟ್ಟಿಸುವ ಕೆಲಸ ಮಾಡಿದ್ದು ನೋಡಿದರೆ ಶಾಸಕರಿಗೆ ಬಂದ್ ಬಗ್ಗೆ ಇರುವ ಭಯ ಎತ್ತಿ ತೋರಿಸುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕರವೇ ಹಿನ್ನೆಲೆ ಬಗ್ಗೆ ಶಾಸಕರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಕರವೇ ಕಳ್ಳರ ವೇದಿಕೆ ಎಂದು ಆಪಾದಿಸುವ ಮುನ್ನ ಶಾಸಕ ಯತ್ನಾಳ ಎಷ್ಟು ಸಾಚಾ ಎಂಬುದು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಬೇಕು ಎಂದು ಮುಲ್ಲಾ ಸವಾಲೆಸೆದರು.

ಬಂದ್ ಗೆ ಎಲ್ಲ ವ್ಯಾಪಾರಸ್ಥರು ಸ್ಪಂದನೆ ನೀಡುತ್ತಿದ್ದಾರೆ. ಅವರಿಗೆ ಶಾಸಕರು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅನೇಕ ವ್ಯಾಪಾರಸ್ಥರು ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ಆದರೂ ಪೊಲೀಸರನ್ನು ಬಳಸಿಕೊಂಡು ಶಾಸಕರು ದಬ್ಬಾಳಿಕೆ ಮಾಡುವುದು ನಿಲ್ಲಿಸಬೇಕು. ಜನರಲ್ಲಿ ಭಯ ಮೂಡಿಸುವುದನ್ನು ನಿಲ್ಲಿಸಬೇಕೆಂದರು.

ಎಂಇಎಸ್ ಬಗ್ಗು ಬಡಿಯುವುದೇ ನಮ್ಮ ಉದ್ದೇಶ. ಮರಾಠಾ ಸಮುದಾಯಕ್ಕೆ ನಮ್ಮ ವಿರೋಧವಿಲ್ಲ. ಮರಾಠಾ ಸಮುದಾಯದ ಏಳಿಗೆಗೆ ಅನುದಾನ ಕೊಡಲು ನಮ್ಮದೂ ಮನವಿ ಇದೆ. ಆದರೆ ಚುನಾವಣೆ ಮುಂದಿಟ್ಟುಕೊಂಡು ಮರಾಠರ ಓಲೈಕೆಗೆ ಮುಂದಾಗಿದ್ದರಿಂದ ಬಂದ್ ಮಾಡುತ್ತಿದ್ದು ಬಂದ್ ಯಶಸ್ವಿಯಾಗಲಿದೆ ಎಂದರು.

ಕರವೇದಲ್ಲಿ ಕೇವಲ ಸಾಬಿಗಳಿದ್ದಾರೆ ಎಂಬ ಯತ್ನಾಳ ಹೇಳಿಕೆ ಚಿಲ್ಲರೆಯಿಂದ ಕೂಡಿದ್ದು. ಕಲಬುರ್ಗಿಯ ಉರ್ದು ಫಲಕ ತೆಗೆಯಬೇಕೆನ್ನುವ ಶಾಸಕ ಯತ್ನಾಳ ತಾವೂ ಕನ್ನಡಿಗರಲ್ಲವಾ? ಎಂದು ಪ್ರಶ್ನಸಿದ ಮುಲ್ಲಾ, ಯತ್ನಾಳ ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚುವುದನ್ನು ಬಿಡಬೇಕು. ಬೌದ್ದ ವಿಹಾರಕ್ಕೆ ಹೋದರೆ ನೀಲಿ ಬಣ್ಣದ ಕೋಡ್ ಧರಿಸುವುದು, ಮತ್ತೊಮ್ಮೆ ಕೇಸರಿ ಕೋಟಗ ಹಾಕುವುದು, ಮುಸ್ಲಿಂ ಕಾರ್ಯಕ್ರಮ ಕ್ಕೆ ಟೋಪಿ ಹಾಕಿಕೊಂಡು ಹೋಗುವುದು....ಇವೆಲ್ಲ ಗಿಮಿಕ್ ಬಿಡಬೇಕೆಂದರು.

ಮುಖಂಡರಾದ ಪ್ರಕಾಶ ಕುಂಬಾರ, ಅಶೋಕ ಹಾರಿವಾಳ, ಫಯಾಜ್ ಕಲಾದಗಿ, ದಸ್ತಗೀರ ಸಾಲೋಟಗಿ, ಮಹಾದೇವ ರಾವಜಿ, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net