ಬೈತೂರು ವಾರ್ಷಿಕ ಹಬ್ಬದಲ್ಲಿ ದೈವಶಕ್ತಿ ದರ್ಶನ

25 gkp 02
Published on

ಗೋಣಿಕೊಪ್ಪ: ಬೈತೂರು ವಾರ್ಷಿಕ ಹಬ್ಬದಲ್ಲಿ ಆಚರಣೆಯಂತೆ 3.10 ಗಂಟೆ ಅವಧಿಯಲ್ಲಿ 12 ಸಾವಿರ ತೆಂಗಿನ ಕಾಯಿಯನ್ನು ಒಡೆಯುವ ಮೂಲಕ ದೈವಶಕ್ತಿ ದರ್ಶನವಾಯಿತು.

ಕೊಡಗು ದೈವಗಳ ಮೂಲ ಸ್ಥಾನದಲ್ಲಿ ಬೇಟೆ ಕುರುಮನ್‌ಗೆ ನಡೆಯುವ ಆಚರಣೆಯಂತೆ ಸಮರ್ಪಣೆ ಮಾಡಲಾಯಿತು. ಒಯಿಂಬದೂಟ್ ಆಚರಣೆ ಮಂಗಳವಾರ ತಡರಾತ್ರಿ ನಡೆಯಿತು. ಏಕಕಾಲದಲ್ಲಿ ತಡೆ ರಹಿತವಾಗಿ ತೆಂಗಿನ ಕಾಯಿಯನ್ನು ಒಡೆಯಲಾಯಿತು. ಪ್ರತಿ ನಿಮಿಷಕ್ಕೆ 70 ತೆಂಗಿನಕಾಯಿಯನ್ನು ಕಲ್ಲಿಗೆ ಎಸೆದು, 3.10 ಗಂಟೆ ಅವಧಿಗೆ ಸಮರ್ಪಿಸಲಾಯಿತು.

ರಾಶಿ ಹಾಕಿರುವ ತೆಂಗಿನ ಕಾಯಿಗಳನ್ನು ಒಬ್ಬನೇ ವ್ಯಕ್ತಿ ತನ್ನ ಎರಡು ಕೈಗಳಿಂದ ಬಾರಿಕಲ್ಲಿಗೆ ಎಸೆದು ಅರ್ಪಿಸಿದರು. ತಡೆರಹಿತವಾಗಿ ಒಡೆಯುವ ಆಚರಣೆ ಇದಾಗಿದೆ. ಇದಕ್ಕಾಗಿ 40 ದಿನ ವೃತದಲ್ಲಿದ್ದು ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆಯಾಗಿದ್ದು, ಪವಾಡ ಎಂಬಂತೆ ಭಕ್ತರು ದೈವಶಕ್ತಿಯ ಪ್ರತಿರೂಪವಾಗಿರುವ ಆಚರಣೆ ಕಣ್ತುಂಬಿಕೊಂಡರು.

ಆನೆ ಮೇಲೆ ದೇವಮೂರ್ತಿ: ಮಂಗಳವಾರ ಪತ್ತೂಟ್ ಆಚರಣೆಯಲ್ಲಿ ಆನೆ ಮೇಲೆ ದೇವರ ಪ್ರದಕ್ಷಿಣೆ ಭಕ್ತಿಭಾವ ಹೆಚ್ಚಿಸಿತು. ಮಧ್ಯಾಹ್ನ 2.30 ಗಂಟೆ ಸುಮಾರಿಗೆ ದೇವರ ಮೂರ್ತಿಯನ್ನು ಹೊರ ತಂದು ಆನೆಯ ಮೇಲೆ ಇಟ್ಟು ಪ್ರದಕ್ಷಿಣೆ ಮಾಡಲಾಯಿತು. ಕೊಡವರು ಕುಪ್ಯಚೇಲೆ, ಮಂಡೆ ತುಣಿ ತೊಟ್ಟು ದುಡಿಕೊಟ್ಟ್ ಮೂಲಕ ದೇವರನ್ನು ಬರ ಮಾಡಿಕೊಂಡರು. ತನ್ನದೇ ಹಾಡಿನಲ್ಲಿ ದೇವರ ಎದುರು ನಿಂತು ಕೊಡಗಿನ ದೇವರುಗಳ ಮೂಲ ಸ್ಥಾನವಾಗಿರುವ ಬೈತೂರಚ್ಚನನ್ನು ಪ್ರಾರ್ಥಿಸಿದರು.

ಬೆಳಗ್ಗೆ ದೇವರ ಅಕ್ಕಿ ಪಾಯಸದ ಪ್ರಸಾದವನ್ನು ಭಕ್ತರು ಸ್ವೀಕರಿಸಿದರು. ವಿಶೇಷ ಪೂಜೆ ನಡೆಯಿತು. ಮಧ್ಯಾಹ್ನ ಸಾವಿರಾರು ಭಕ್ತರು ಅನ್ನದಾನ ಸ್ವೀಕರಿಸಿದರು. ಮೈಮೇಲೆ ಬರುವವರು ದೇವರ ಗೆಜ್ಜೆ ತಂಡ್, ಕೋಲ್, ಕಡತಲೆ ಸ್ಥಾನ ಎದುರು ಇಟ್ಟು ಪೂಜಿಸಿದರು.

ಭಕ್ತರ ದಂಡು: ಕರೊನಾದಿಂದಾಗಿ ದೇವಸ್ಥಾನ ಪ್ರವೇಶ ನಿರ್ಬಂಧ ತೆರವುಗೊಂಡ ಹಿನ್ನೆಲೆ, ಕೊಡಗು ಜಿಲ್ಲೆಯ ಭಕ್ತರು ಹೆಚ್ಚು ಕಂಡು ಬಂದರು. ಮಂಗಳವಾರ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿದರು. ಕೊಡವ ಸಾಂಪ್ರದಾಯಿಕ ಸೀರೆ, ಕುಪ್ಯಚೇಲೆ, ಮಂಡೆತುಣಿ ತೊಟ್ಟು ದೇವರ ಪ್ರಾರ್ಥನೆ ನಡೆಸಿದರು. ಮಧ್ಯಾಹ್ನದ ಹೊತ್ತಿಗೆ ಸಾವಿರಾರು ಭಕ್ತರು ಸೇರಿ ದೇವರ ಪ್ರದಕ್ಷಿಣೆ ಸಂದರ್ಭ ಬೈತೂರಚ್ಚನ ನೆನೆದು ಪುನೀತರಾದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ ವಿಶೇಷತೆ ಮೂಡಿಸಿತು.

ಶ್ರೀ ವಯತ್ತೂರ್ ಕಲಿಯಾರ್ ದೇವಸ್ಥಾನ ಸಮಿತಿ ಮುಖ್ಯಸ್ಥ ಒ.ವಿ.ರಾಜನ್, ಟ್ರಸ್ಟಿಗಳಾದ ಹರಿಚಂದ್ರನ್ ನಂಬಿಯಾರ್, ಪುಗ್ಗೇರ ಪಿ.ಪೊನ್ನಪ್ಪ, ಮಾಳೇಟೀರ ರತ್ನ ಸುಬ್ಬಯ್ಯ, ಹರಿದಾಸ್ ಪಳಿಯತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net