

ಹಾಸನ :ಸಾಲಗಾಮೆ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುವಾಗ ಹಂಪ್ ನೆಗೆಸಿದ್ದರಿಂದ ಬೈಕ್ ಹಿಂಬದಿ ಕುಳಿತಿದ್ದ ಸವಾರ ನೆಲಕ್ಕೆ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ.
ಹಾಸನದ ಜಯನಗರ ಬಡಾವಣೆಯ ವಾಸಿಯಾದ ಲಕ್ಷ್ಮಣ (42) ಮೃತ ವ್ಯಕ್ತಿ.
ತಾಯಿಯ ಆರಾಧನೆ ಕಾರ್ಯಕ್ಕೆಂದು ದಿನಸಿ ಸಾಮಾನು ತರಲು ಲಕ್ಷ್ಮಣ ಪಕ್ಕದ ಮನೆಯ ನಿವಾಸಿ ಕಾಂತರಾಜು ಅವರೊಂದಿಗೆ ಅವರ ಬೈಕಿನಲ್ಲಿ ಕುಳಿತುಕೊಂಡು ಸೋಮವಾರ ಮನೆಯಿಂದ ಹೊರಟಿದ್ದಾರೆ. ಬೆಳಗ್ಗೆ 5.45ರ ಸಮಯದಲ್ಲಿ ಹಾಸನ ನಗರದ ಸಾಲಗಾಮೆ ಗೇಟ್ ಹತ್ತಿರವಿರುವ ಸಂಜೀವಿನಿ ಆಸ್ಪತ್ರೆ ಎದುರು ಹಾಸನ-ಸಾಲಗಾಮೆ ರಸ್ತೆಯಲ್ಲಿ ಕಾಂತರಾಜು ಬೈಕ್ ಅನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯಲ್ಲಿದ್ದ ಹಂಪ್ ನೆಗೆಸಿದ್ದಾರೆ. ಹಂಪ್ ನೆಗೆಸಿದಾಗ ಹಿಂಬದಿ ಕುಳಿತಿದ್ದ ಲಕ್ಷ್ಮಣ ನಿಯಂತ್ರಣ ತಪ್ಪಿ ಬೈಕ್‌ನಿಂದ ರಸ್ತೆಯ ಮೇಲೆ ಬಿದ್ದಿದ್ದಾರೆ. ತಲೆ ಹಾಗು ದೇಹದ ಇತರೆ ಭಾಗಗಳಿಗೆ ಪೆಟ್ಟಾಗಿದ್ದ ಲಕ್ಷ್ಮಣ್‌ನನ್ನು ಕೂಡಲೇ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಲಕ್ಷ್ಮಣ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಪಘಾತ ಮಾಡಿ, ಲಕ್ಷ್ಮಣ ಸಾವಿಗೆ ಕಾರಣನಾದ ಬೈಕ್ ಚಾಲಕ ಕಾಂತರಾಜು ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ಮೃತರ ಅಣ್ಣ ಪುರುಷೋತ್ತಮ ಹಾಸನ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.