

ಹಾಸನ: ಅತಿವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಬೈಕಿಗೆ ಗುದ್ದಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಉದಯಪುರದ ಎನ್.ಹೆಚ್-75 ಫ್ಲೈಓವರ್ ಮೇಲೆ ಸೋಮವಾರ ರಾತ್ರಿ ನಡೆದಿದೆ.
ಹಾಸನ ತಾಲೂಕು, ಕಟ್ಟಾಯ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಆರ್. ಪವನ್ (27) ಮೃತ ಯುವಕ.
ಅದೇ ಗ್ರಾಮದ ಆಂಟೋನಿ ಕುಮಾರ್ ಜತೆಗೆ ಪವನ್ ಕೆಲಸದ ನಿಮಿತ್ತ ಬೆಂಗಳೂರಿಗೆ ಬೈಕಿನಲ್ಲಿ ಹೊರಟಿದ್ದರು. ಎನ್.ಎಚ್.75 ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಫ್ಲೈ ಓವರ್ ಮೇಲೆ ಹೋಗುತ್ತಿದ್ದಾಗ ಅದೇ ಸಮಯದಲ್ಲಿ ಹಾಸನ ಕಡೆಯಿಂದ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಚಾಲಕ ಬೈಕಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಹಿಂಬದಿ ಕುಳಿತಿದ್ದ ಪವನ್ ಹಾಗು ಬೈಕ್ ಚಲಾಯಿಸುತ್ತಿದ್ದ ಅಂಥೋಣಿ ಕುಮಾರ್ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದಾರೆ. ಪವನ್ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಂಥೋಣಿ ಕುಮಾರ್‌ಗೆ ಎಡ ಕಾಲು, ಮೈ ಕೈಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.