ಬೈಕ್‌ಗೆ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ ದಂಪತಿ ಸಾವು

ಬೈಕ್‌ಗೆ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ ದಂಪತಿ ಸಾವು
Published on

ಹಾಸನ : ಮೊಮ್ಮಗಳ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಳ್ಳಲು ಹಳ್ಳಿಯಿಂದ ಹಾಸನ ನಗರಕ್ಕೆ ದಂಪತಿಗಳಿಬ್ಬರು ಬರುತ್ತಿದ್ದ ಬೈಕ್‌ಗೆ ಟೆಂಪೋ ಟ್ರಾವೆಲರ್ ವಾಹನ ಡಿಕ್ಕಿಯಾದ ಪರಿಣಾಮ ದಂಪತಿ ಮೃತಪಟ್ಟ ಘಟನೆ ನಗರದ ಬಿಎಂ ರಸ್ತೆಯ ಹೆಗ್ಗಡಿಹಳ್ಳಿ ಸಮೀಪ ಮಂಗಳವಾರ ರಾತ್ರಿ ನಡೆದಿದೆ.

ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ಮೆಳಗೋಡು ಗ್ರಾಮದ ನಿವಾಸಿಯಾದ ನಿವೃತ್ತ ಶಿಕ್ಷಕ ಶಿವೇಗೌಡ (61) ಹಾಗೂ ಅವರ ಪತ್ನಿ ಗಂಗಮ್ಮ (55) ಮೃತ ದುರ್ದೈವಿಗಳು.

ಮಂಗಳವಾರದಂದು ಮೊಮ್ಮಗಳ ಹುಟ್ಟುಹಬ್ಬದ ನಿಮಿತ್ತ ಹಾಸನಕ್ಕೆ ಮೆಳಗೋಡು ಗ್ರಾಮದಿಂದ ದಂಪತಿ ಬೈಕಿನಲ್ಲಿ ಬರುತ್ತಿದ್ದರು. ರಾತ್ರಿ 8 ಗಂಟೆ ಸಮಯದಲ್ಲಿ ಬಿಎಂ ರಸ್ತೆಯ ಹೆಗ್ಗಡಿಹಳ್ಳಿ ಸಮೀಪ ಬರುತ್ತಿರುವಾಗ ಅದೇ ಸಮಯಕ್ಕೆ ಹಾಸನ ಕಡೆಯಿಂದ ಅತಿವೇಗವಾಗಿ ಎದುರುಗಡೆಯಿಂದ ಬಂದ ಟೆಂಪೋ ಟ್ರಾವೆಲರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಡ-ಹೆಂಡತಿ ಇಬ್ಬರೂ ಬೈಕಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಇಬ್ಬರಿಗೂ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಶಿವೇಗೌಡ ಅವರು ಮೃತಪಟ್ಟಿದ್ದಾರೆ. ಗಂಗಮ್ಮ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾಗ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಪಘಾತ ಮಾಡಿ, ಇಬ್ಬರ ಸಾವಿಗೆ ಕಾರಣವಾಗಿರುವ ಟೆಂಪೋ ಟ್ರಾವೆಲರ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಮೃತರ ಸೊಸೆ ದೀಪಾ ಅವರು ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net