

ಹಾಸನ: ಹೋಗುತ್ತಿದ್ದ ಬೈಕಿಗೆ ಎದುರುಗಡೆಯಿಂದ ಬಂದ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮಲ್ಲಿಪಟ್ಟಣ-ಅರಕಲಗೂಡು ರಸ್ತೆಯ ಬಿದಿರುಮಳೆಕೊಪ್ಪಲು ಗ್ರಾಮದ ಹತ್ತಿರ ಗುರುವಾರ ರಾತ್ರಿ ನಡೆದಿದೆ.
ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆ ಹೋಬಳಿಯ ರಾಯರಕೊಪ್ಪಲು ಮಗ್ಗೆ ಗ್ರಾಮದ ನಿವಾಸಿಯಾದ ಯೂಸಫ್ ಅಹಮದ್ (19) ಮೃತ ಯುವಕ.
ಗುರುವಾರ ಯೂಸಫ್ ಅರಕಲಗೂಡಿನ ಮೆಡಿಕಲ್ ಶಾಪ್‌ಗೆ ಹೋಗಲೆಂದು ರಾತ್ರಿ ಸುಮಾರು 08.20ರ ಸಮಯದಲ್ಲಿ ಮಲ್ಲಿಪಟ್ಟಣದಿಂದ ಅರಕಲಗೂಡು ಕಡೆಗೆ ಬರುವಾಗ ಬಿದಿರುಮಳೆಕೊಪ್ಪಲು ಗ್ರಾಮದ ಹತ್ತಿರ ಅರಕಲಗೂಡು ಕಡೆಯಿಂದ ವೇಗವಾಗಿ ಬಂದ ಮೂರು ಚಕ್ರದ ಗೂಡ್ಸ್ ಆಟೋ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸಿದೇ ಪರಾರಿಯಾಗಿದ್ದಾನೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಯೂಸಫ್ ಅವರನ್ನು ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯೂಸಫ್ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.