

ಹಾಸನ: ನಗರ ಹೊರವಲಯದ ಬಿ.ಕಾಟೀಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಬೈಕ್‌ಗೆ ಕ್ಯಾಂಟರ್ ಡಿಕ್ಕಿಯಾಗಿ ತಾಯಿ- ಮಗ ಸ್ಥಳದಲ್ಲೇ ಧಾರುಣವಾಗಿ ಸಾವಿಗೀಡಾಗಿದ್ದಾರೆ.
ಬಿ.ಕಾಟೀಹಳ್ಳಿ ನಿವಾಸಿಗಳಾದ ವಕೀಲ ಸತೀಶ್ (42), ಕಮಲಮ್ಮ (71) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ಯಾಂಟರ್ ಪಲ್ಟಿಯಾಗಿದೆ. ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ.
ತಾಯಿ ಮಗ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪೋದಾರ್ ಇಂಟರ್ನ್ಯಾಷನಲ್ ಶಾಲೆಯ ಸಮೀಪ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದರು.
ಸ್ಥಳೀಯರ ಆಕ್ರೋಶ:
ಅಪಘಾತದಲ್ಲಿ ಇಬ್ಬರು ಮೃತಪಟ್ಟ ತಕ್ಷಣ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಈ ಭಾಗದಲ್ಲಿ ಇರುವಂತಹ ಸಿಮೆಂಟ್ ಗೋಡನ್‌ಗಳು ಮತ್ತು ಇನ್ನಿತರೆ ಗೋಡನ್‌ಗಳಿಂದ ಹೆಚ್ಚು ವಾಹನ ದಟ್ಟಣೆಯಿಂದ ಇಂತಹ ಅವಘಡಗಳು ಆಗಾಗ ಸಂಭವಿಸುತ್ತದೆ. ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ ಈ ಸಾವಿಗೆ ಈ ಗೋಡನ್‌ಗಳ ಮಾಲೀಕರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿನಿತ್ಯ ಇಲ್ಲಿ ರಸ್ತೆಯ ಎರಡು ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಿಕೊಂಡು ಸಾಕಷ್ಟು ಸಮಸ್ಯೆಗಳನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಆ ಗೋಡನ್‌ಗಳ ಮಾಲೀಕರನ್ನು ಸ್ಥಳಕ್ಕೆ ಕರೆಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಪಟ್ಟು ಹಿಡಿದು, ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾದರು. ಆಗ ಪೊಲೀಸರು ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ರಸ್ತೆ ಬದಿಯಲ್ಲಿ ನಿಲ್ಲಿಸಿರುವಂತಹ ಲಾರಿಗಳನ್ನು ಠಾಣೆಗೆ ತೆಗೆದುಕೊಂಡು ಹೋಗಿ ಪ್ರಕರಣ ದಾಖಲಿಸುವುದಾಗಿ ಭರವಸೆ ನೀಡಿದರು. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಮುರಳೀಧರ್ ಸೇರಿದಂತೆ ಸಿಬ್ಬಂದಿ ಆಗಮಿಸಿ ಮುಂಜಾಗ್ರತ ಕ್ರಮ ಕೈಗೊಂಡರು
ಲಾರಿಗಳ ಮೇಲೆ ಕಲ್ಲು ತೂರಾಟ:
ಅಪಘಾತಕ್ಕೆ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸಿರುವಂತಹ ಲಾರಿಗಳು ಎಂದು ಆರೋಪಿಸಿ ಸ್ಥಳೀಯರು 5 ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಪುಡಿ ಮಾಡಿದರು. ಅಪಘಾತ ನಡೆಯುತ್ತಿದ್ದಂತೆ ಗೋಡನ್‌ಗಳಲ್ಲಿ ಇದ್ದಂತಹ ಕಾರ್ಮಿಕರು, ಸಿಮೆಂಟ್ ತುಂಬಿಕೊಂಡು ನಿಂತಿದಂತಹ ಲಾರಿಗಳ ಚಾಲಕರು ಬಾಗಿಲು ಹಾಕಿಕೊಂಡು ಪರಾರಿಯಾದರು.
ಪ್ರಾಂಶುಪಾಲರಿಗೆ ತರಾಟೆ:
ಈ ರಸ್ತೆಯಲ್ಲಿ ಪೋದಾರ್ ಇಂಟರ್‌ನ್ಯಾಷನಲ್ ಕಾಲೇಜು ಮತ್ತು ಸೆಂಟ್ ಜೋಸೆಫ್ ಕಾಲೇಜ್ ಹಾಗೂ ನಸಿರ್ಂಗ್ ಕಾಲೇಜುಗಳಿದ್ದು ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಅವರಿಗೆ ಏನಾದರೂ ಅನಾಹುತವಾದರೆ ಯಾರು ಹೊಣೆ. ತಕ್ಷಣವೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪೋದಾರ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರನ್ನು ಸ್ಥಳೀಯರು ತಾರಾಟೆಗೆ ತೆಗೆದುಕೊಂಡರು.
ತಕ್ಷಣವೇ ಶಾಲೆಯ ಮುಖ್ಯಸ್ಥರು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟವರಿಗೆ ಈ ರಸ್ತೆಯಲ್ಲಿ ವಾಹನಗಳ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆಗೆ ಹಂಪ್ ಹಾಕಿಸುವುದರ ಜತೆಗೆ ಬ್ಯಾರಿಕೆಟ್ ಹಾಕುವಂತೆ ಒತ್ತಾಯಿಸಿ ಮನವಿ ಪತ್ರ ಕೊಡಿ. ಆ ಪತ್ರಕ್ಕೆ ಸ್ಥಳೀಯರೆಲ್ಲರೂ ಕೂಡ ಸಹಿ ಮಾಡಿ ಕೊಡುತ್ತೇವೆ ಎಂದು ಒತ್ತಾಯಿಸಿದರು.