ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಜಾಗೃತಿ

bir police
ಬೀರೂರಿನಲ್ಲಿ ಪೊಲೀಸರು ದ್ವಿಚಕ್ರ ವಾಹನ ಚಾಲಕರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಧರಿಸುವ ಮಹತ್ವದ ಅರಿವು ಮೂಡಿಸಿದರು. ಸಿಪಿಐ ಶ್ರೀಕಾಂತ್, ತಿಪ್ಪೇಶ್, ನಾಗರಾಜ್, ಚಂದ್ರಶೇಖರ್ ಇತರರಿದ್ದರು.
Published on

ಬೀರೂರು: ಸುರಕ್ಷಿತ ದ್ವಿಚಕ್ರ ವಾಹನ ಸಂಚಾರಕ್ಕೆ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರನ್ನು ತಡೆದು ಅವರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಜೀವರಕ್ಷಕ ಎನ್ನುವುದನ್ನು ತಿಳಿಸಲಾಗುತ್ತಿದೆ ಎಂದು ಸಿಪಿಐ ಶ್ರೀಕಾಂತ್ ತಿಳಿಸಿದರು.

ಪೊಲೀಸ್ ಠಾಣೆ ಮುಂಭಾಗದಲ್ಲಿ ಗುರುವಾರ ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ಮಾತನಾಡಿದರು. ವಾಹನವನ್ನು ಅವಸರದಿಂದ ಚಾಲನೆ ಮಾಡುವುದು ಕೂಡ ಅಪಾಯ. ದ್ವಿಚಕ್ರ ವಾಹನ ಅಪಘಾತ ಸಂಭವಿಸಿದಾಗಿ ಬಹುತೇಕ ತಲೆಗೆ ಪೆಟ್ಟು ಬೀಳುತ್ತದೆ. ಇದರಿಂದ ಜೀವಕ್ಕೂ ಕುತ್ತು ಬರುತ್ತದೆ. ಆದ್ದರಿಂದ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸದೆ ಚಲಾಯಿಸಬಾರದು. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಬೇಕು. ಈ ಬಾರಿ ಚಾಲಕರಿಗೆ ಗುಲಾಬಿ ನೀಡಿ ಹೆಲ್ಮೆಟ್ ಅರಿವು ಮೂಡಿಸುತ್ತಿದ್ದೇವೆ. ಮುಂದಿನ ಬಾರಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಿಎಸ್‌ಐ ತಿಪ್ಪೇಶ್ ಮಾತನಾಡಿ, ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ, ಹೆಲ್ಮೆಟ್ ಧರಿಸದೆ, ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ಚಾಲನೆ ಮಾಡಲು ಕೊಡುವುದು ಸೇರಿದಂತೆ ಹಲವಾರು ರೀತಿಯ ತಪ್ಪುಗಳು ನಡೆಯುತ್ತಿವೆ. ಸರ್ಕಾರ ವಿವಿಧ ರೀತಿಯ ಅಭಿಯಾನಗಳನ್ನು ಆಯೋಜಿಸಿ ಅಪಘಾತ ನಿಯಂತ್ರಣಕ್ಕೆ ಕ್ರಮವಹಿಸುತ್ತಿದೆ. ಆದರೂ ಅಪಘಾತಗಳೇನೂ ಕ್ಷೀಣಿಸಿಲ್ಲ. ವಾಹನ ಚಾಲನೆಗೂ ಮುನ್ನ ನಿಮ್ಮ ಜೀವ ಕುಟುಂಬಕ್ಕೆ ಮತ್ತು ನಿಮಗೆ ಎಷ್ಟು ಮುಖ್ಯವಾಗಿದೆ ಎಂಬ ಅರಿವು ನಿಮಗಿರಲಿ. ಅಪಘಾತ ಸಂಭವಿಸಿದಾಗ ಹೆಲ್ಮೆಟ್ ಧರಿಸಿದ್ದರೆ ನಿಮ್ಮ ಜೀವಕ್ಕೆ ಹಾನಿಯಾಗುವುದನ್ನು ತಡೆಯುತ್ತದೆ ಎಂದರು.

ಎಎಸ್‌ಐ ನಾಗರಾಜ್, ಚಂದ್ರಶೇಖರ್, ಸಿಬ್ಬಂದಿ ಶಿವಾನಂದ್, ರಾಜಕುಮಾರ್, ರವಿನಾಯ್ಕ, ಪಾಂಡುರಂಗ, ರಾಧಾ, ಅಂಬಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net