

ಹಾಸನ : ಬೈಕ್ ವ್ಹೀಲಿಂಗ್ ಮಾಡಬೇಡ ಎಂಬ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ನಗರದ ಹೊರವಲಯದ ಗವೇನಹಳ್ಳಿ ಸಮೀಪ ಶುಕ್ರವಾರ ರಾತ್ರಿ ನಡೆದಿದೆ ಎಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ತಿಳಿಸಿದರು.
ನಗರದ ಹುಣಸಿನಕೆರೆ ನಿವಾಸಿಯಾದ ಆಟೋ ಚಾಲಕ ಸುಮಂತ್ (23) ಎಂಬಾತನೇ ಮೃತಪಟ್ಟ ಯುವಕ.
ಈ ವಿಷಯವಾಗಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್ಪಿ, ಶುಕ್ರವಾರ ಗವೇನಹಳ್ಳಿ ಸುತ್ತಮುತ್ತ ಸುಮಂತ್ ತನ್ನ ಬೈಕಿನಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದಲ್ಲದೆ, ಬೈಕ್‌ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ. ಈ ಸಂಬಂಧ ಸ್ಥಳೀಯರು ಈತನಿಗೆ ಬುದ್ಧಿ ಹೇಳಿ ಕಳುಹಿಸಲು ಮುಂದಾದರು. ಈ ವೇಳೆ ಸುಮಂತ್ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕ ತಲುಪಿತು. ನಂತರ ಸಾರ್ವಜನಿಕರು ಸಮಾಧಾನಪಡಿಸಿ ಸುಮಂತ್‌ನನ್ನು ಕಳುಹಿಸಿಕೊಟ್ಟಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸುಮಂತ್ ನಂತರ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ತನ್ನ ಮೇಲೆ ಹಲ್ಲೆಗೆ ಬಂದ ತಂಡದವರನ್ನು ಫೋನಿನ ಮೂಲಕ ಮತ್ತೆ ಗಲಾಟೆಯಾದ ಜಾಗಕ್ಕೆ ಕರೆಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.
ಸುಮಂತ್ ಹೋಗುವಾಗ ತನ್ನೊಂದಿಗೆ ಲಾಂಗ್, ಚಾಕು ಹಾಗೂ ಸ್ನೇಹಿತರ ಜೊತೆ ತೆರಳಿದ್ದ. ಮತ್ತೆ ಸ್ಥಳೀಯ ತಂಡದವರೊಂದಿಗೆ ವಾಗ್ವಾದ ನಡೆಸಿ ಗಲಾಟೆಗೆ ಮುಂದಾದರು. ಈ ಸಂದರ್ಭದಲ್ಲಿ ಗವೇನಹಳ್ಳಿ ಪ್ರಜ್ವಲ್ ಮತ್ತು ಇನ್ನಿತರೆ ಯುವಕರು ಸುಮಂತ್ ತಂದಿದ್ದ ಮಾರಕಾಸತ್ರಗಳಿಂದಲೇ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಸುಮಂತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಎದೆ ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು.
ಘಟನೆ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯುವಕರನ್ನು ಬಂಧಿಸಲಾಗಿದೆ. ಉಳಿದ ಇಬ್ಬರನ್ನು ಬಂಧಿಸಲು ನಮ್ಮ ತಂಡ ಮುಂದಾಗಿದೆ. ಪ್ರಕರಣವು ತನಿಖೆ ಹಂತದಲ್ಲಿದ್ದು, ಸ್ಥಳದಲ್ಲಿ ಯಾರ‌್ಯಾರು ಇದ್ದರು, ಸುಮಂತನ ಜೊತೆ ಯಾರ‌್ಯಾರು ಹೋಗಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಕೆಲವು ಸಿಸಿ ಕ್ಯಾಮೆರಾದಲ್ಲಿ ವಿಡಿಯೋ ಲಭ್ಯವಾಗಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಎಎಸ್ಪಿ ತಮ್ಮಯ್ಯ ಮಾಹಿತಿ ನೀಡಿದರು.