ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿಯ ಸೆಸ್ಕ್ ಸ್ಟೇಷನ್ ಮುಂಭಾಗ ನಡೆದು ಹೋಗುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿಯೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂತೇಮರಹಳ್ಳಿ ಗ್ರಾಮದ ನಿವಾಸಿ ಶಂಕರಪ್ಪ(65) ಮೃತ ದುರ್ದೈವಿ. ಸಂತೇಮರಹಳ್ಳಿ ಗೂಡಿನ ಮಾರುಕಟ್ಟೆ ಬಳಿಯ ಮುಖ್ಯರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಕುದೇರು ಹಾಲಿನ ಡೇರಿಯಿಂದ ಸೂರಪುರಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕ ಶಂಕರಪ್ಪ ಅವರಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಜಖಂಗೊಂಡಿದ್ದು, ಸವಾರನಿಗೂ ಸಣ್ಣ-ಪುಟ್ಟ ಗಾಯವಾಗಿದೆ. ವಿಷಯ ತಿಳಿದು ಸಂತೇಮರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಶವ ಪರೀಕ್ಷೆಗಾಗಿ ಮೃತ ದೇಹವನ್ನು ಸಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.