

ಹಾಸನ: ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬೈಕಿ ಡಿಕ್ಕಿಯಲ್ಲಿ ಇಟ್ಟಿದ್ದ 6.21 ಲಕ್ಷ ರೂ. ಹಣವನ್ನು ಖದೀಮರು ಕಳವು ಮಾಡಿಕೊಂಡು ಹೋಗಿರುವ ಘಟನೆ ಗುರುವಾರ ನಗರದಲ್ಲಿ ನಡೆದಿದೆ.
ನಗರದ ಲಕ್ಷ್ಮೀಪುರ ಬಡಾವಣೆಯ ಜವೇನಹಳ್ಳಿ ಮಠದ ಸಮೀಪದ ನಿವಾಸಿಯಾದ ಶ್ರೀಗೋಪುರಂ ಎಂಬುವರು ಮಧ್ಯಾಹ್ನ 1.45 ಸಮಯದಲ್ಲಿ ಸ್ನೇಹಿತ ಶಿವಾಜಿ ರಾಜಿ ಪುರೋಹಿತ್ ಎಂಬುವರ ರಾಜಧಾನಿ ಮೊಬೈಲ್ ಅಂಗಡಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪುರೋಹಿತ್ ಮನೆ ಕೆಲಸ ಮಾಡಿಸುತ್ತಿದ್ದ ಗುತ್ತಿಗೆದಾರರಿಗೆ ಹಣ ನೀಡಬೇಕು. ಎಪಿಎಂಸಿ ಯಾರ್ಡ್ ಬಳಿ ಇರುವ ಐಸಿಐಸಿಐ ಬ್ಯಾಂಕಿಗೆ ಹೋಗಿ ಹಣ ಡ್ರಾ ಮಾಡಿಕೊಂಡು ಬಾ ಎಂದು ಹೇಳಿ ಚೆಕ್ ನೀಡಿದ್ದಾರೆ. ಚೆಕ್ ಪಡೆದ ಶ್ರೀಗೋಪುರಂ ಅವರು ಬ್ಯಾಂಕಿಗೆ ತೆರಳಿ 6,21,500 ರೂ. ನಗದನ್ನು ಡ್ರಾ ಮಾಡಿಕೊಂಡು ತಮ್ಮ ಬೈಕಿನ ಡಿಕ್ಕಿಯಲ್ಲಿ ಇಟ್ಟುಕೊಂಡು ಮತ್ತೆ ಅಂಗಡಿಗೆ ಬಂದಿದ್ದಾರೆ. ಆನಂತರ ಸ್ನೇಹಿತ ಶಿವಾಜಿ ರಾಜಿ ಪುರೋಹಿತ್ ಮತ್ತೊಂದು ಚೆಕ್ ನೀಡಿ 2,97,500 ಹಣವನ್ನು ಮತ್ತೊಮ್ಮೆ ಡ್ರಾ ಮಾಡಿಕೊಂಡು ಬರುವಂತೆ ಹೇಳಿದ್ದಾರೆ.
ಈಗಾಗಲೇ ಡ್ರಾ ಮಾಡಿಕೊಂಡು ಬಂದಿದ್ದ ಹಣವನ್ನು ಬೈಕ್ ಡಿಕ್ಕಿಯಲ್ಲೇ ಇರಿಸಿಕೊಂಡು ಮತ್ತೆ ಬ್ಯಾಂಕಿಗೆ ಹೋಗಿ 2,97,500 ರೂ. ಡ್ರಾ ಮಾಡಿಕೊಂಡು ಬಂದು ಡಿಕ್ಕಿಗೆ ಹಣ ಇಡಲು ಹೋದಾಗ ಡಿಕ್ಕಿ ಓಪನ್ ಆಗಿರುವುದು ತಿಳಿದುಬಂದಿದೆ. ನಂತರ ಡಿಕ್ಕಿ ತೆಗೆದು ನೋಡಿದಾಗ 6,21,500 ಹಣ ಕಳ್ಳತನವಾಗಿರುವುದು ತಿಳಿದುಬಂದಿದೆ. ಅಕ್ಕಪಕ್ಕದವರನ್ನು ವಿಚಾರಿಸಿದರೂ ಕೂಡ ಯಾವುದೇ ಮಾಹಿತಿ ದೊರೆಯಲಿಲ್ಲ. ತಕ್ಷಣವೇ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.