ಬೈಕ್ ಟ್ಯಾಕ್ಸಿ ನಿಷೇಧ ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ

4
Published on

ಮೈಸೂರು: ಬೈಕ್ ಟ್ಯಾಕ್ಸಿ ವಿರುದ್ಧ ವಿಧಿಸಿರುವ ನಿಷೇಧವನ್ನು ವಾಪಸ್ ಪಡೆಯಲು ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಬೈಕ್ ಟ್ಯಾಕ್ಸಿ ಸವಾರರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸವಾರರು, ಹಲವು ವರ್ಷಗಳಿಂದ ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರ ನಗರಗಳಲ್ಲಿ ಬೈಕ್ ಟ್ಯಾಕ್ಸಿ ಚಾಲನೆ ಮಾಡುತ್ತ ಸಮುದಾಯಗಳಿಗೆ ಜೀವನಾಡಿಯಾಗಿದ್ದೇವೆ. ದೊಡ್ಡ ನಗರಗಳಲ್ಲಿ ಜನರಿಗೆ ಟ್ರಾಫಿಕ್ ಒತ್ತಡ ನಿವಾರಿಸಲು ಮತ್ತು ತ್ವರಿತವಾಗಿ ಅಗತ್ಯವಿದ್ದ ಕಡೆಗೆ ಸಂಚರಿಸಲು ನಮ್ಮ ಸೇವೆ ನೆರವಾಗುತ್ತವೆ ಎಂದು ಹೇಳಿದರು.

ಉದ್ಯೋಗ ಇಲ್ಲದ ಯುವಜನರಿಗೆ ಇದು ಆದಾಯ ಮೂಲವಾಗಿದೆ. ಇದರ ಮೂಲಕ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇತ್ತೀಚೆಗೆ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಲಾಗಿದೆ. ಆಹಾರ, ಮನೆ ಅಗತ್ಯ ವಸ್ತುಗಳ ಸಾಗಣೆ ಸೇವೆಗೆ ಅನುಮತಿ ನೀಡಲಾಗಿದ್ದು. ಜನರನ್ನು ಕರೆದುಕೊಂಡು ಹೋಗುವ ಬೈಕ್ ಟ್ಯಾಕ್ಸಿ ಸೇವೆಗೆ ಮಾತ್ರ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಮೋಟಾರ್ ವಾಹನ ಕಾಯ್ದೆ ಅಡಿ ಒಂದೇ ಕಾನೂನಿನ ಅಡಿ ಬಂದರೂ, ಜನರ ಸೇವೆಗೆ ಮಾತ್ರ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ವಕೀಲ ನಿತಿನ್‌ನಾಯಕ್, ಪರಶಿವಮೂರ್ತಿ, ರಮೇಶ್, ರವಿ, ಪ್ರಿಯಾ, ಜಯರಾಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net