

ಹಾಸನ : ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ಒಬ್ಬ ವಿದ್ಯಾರ್ಥಿ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಹಾಸನ ತಾಲೂಕಿನ ಚಿಕ್ಕಕಡಲೂರು ಗ್ರಾಮದ ಅಭಿಲಾಷ್ (22) ಮೃತ ವಿದ್ಯಾರ್ಥಿ. ದೊಡ್ಡಪುರ ಗ್ರಾಮದ ರಘು ಮತ್ತು ವರುಣ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಅಭಿಲಾಷ್, ರಘು, ವರುಣ್ ಶುಕ್ರವಾರ ಬೈಕ್‌ನಲ್ಲಿ ಸಕಲೇಶಪುರದ ಸುತ್ತಮುತ್ತ ಸುತ್ತಾಡಲು ತೆರಳುತ್ತಿದ್ದರು. ಈ ಸಂದರ್ಭ ಸಂತೆಪೇಟೆ ಸರ್ಕಲ್ ಬಳಿ ಲಾರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಭಿಲಾಷ್ ಸ್ಥಳದಲ್ಲೇ ಮೃತಪಟ್ಟ. ರಘುವಿನ ಕಾಲು ಮುರಿದಿದ್ದು, ವರುಣ್ ತಲೆಗೆ ಗಾಯಗಳಾಗಿವೆ. ತಕ್ಷಣವೇ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.