ಬೇಸಿಗೆ ವರ್ಷ ಸಕಲ ಜೀವ ರಾಶಿಯಲ್ಲೂ ಹರ್ಷ

03_HSN_05
Published on

ಹಾಸನ: ಬೇಸಿಗೆಯ ಬಿಸಿಲ ಬೇಗೆಯಲ್ಲಿ ದಣಿದಿದ್ದ ಜನಕ್ಕೆ ಪೂರ್ವ ಮುಂಗಾರು ಮಳೆ ಭಾರೀ ತಂಪನ್ನು ಎರೆದಿದೆ. ಹಾಸನ ನಗರದಲ್ಲಿ ಗುರುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ವರುಣರಾಯ ಯಾವುದೇ ಗಾಳಿ, ಗುಡುಗು, ಸಿಡಿಲು ಇಲ್ಲದೇ ಸೊಂಪಾಗಿ ಸತತ ಎರಡು ಗಂಟೆಗಳ ಕಾಲ ಸುರಿದು ಜಿಲ್ಲೆಯ ಬಿಸಿಯನ್ನು ತಣಿಸಿ, ನೀರಿಲ್ಲದೆ ಬಸವಳಿದಿದ್ದ ಮರ- ಗಿಡಗಳಿಗೆ ನೀರನ್ನುಣ್ಣಿಸಿ, ಬಿಸಿಯ ಬೇಗೆಯಲ್ಲಿ ಕಂಗೆಟ್ಟಿದ್ದ ಜನರ ಮನಸ್ಸಿಗೆ ತಂಪನೆಯ ತಂಗಾಳಿ ಸೂಸಿದೆ.

ಯುಗಾದಿ ವರ್ಷಾರಂಭದ ಮೂರನೇ ಮಳೆ ಜಿಲ್ಲೆಯಲ್ಲಿ ಸಿಂಚನವಾಗಿದ್ದು, ಬೇಸಿಗೆಯ ಬಿಸಿ ಗಾಳಿಯ ಸುಳಿವು ಸಿಗದಂತೆ ಮಾಡಿದೆ. ಕಳೆದ ವರ್ಷ ಈ ವೇಳೆಗಾಗಲೇ ಜಿಲ್ಲೆಯ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿ ಮಲೆನಾಡಿದ ಜನರ ಮನ, ದೇಹವನ್ನು ಹೈರಾಣಾಗಿಸಿತ್ತು. ಅಷ್ಟೇ ಅಲ್ಲೇ ಪ್ರಮುಖವಾಗಿ ಬೇಸಿಗೆ ಸಮಯದಲ್ಲಿ ರೈತರು ತಮ್ಮ ಬೆಳೆಗಳಿಗೆ ನೀರು ಹಾಯಿಸಲು ಪಡಿಪಾಟಿಲು ಪಟ್ಟಿದ್ದರು. ಆದರೆ, ಈ ವರ್ಷದ ಏಪ್ರಿಲ್ ಆರಂಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದು ಜಿಲ್ಲೆಯ ರೈತರು ಹಾಗೂ ಜನರ ಮನೋಲ್ಲಾಸವನ್ನು ನೂರ್ಮಡಿ ಮಾಡಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಜಿಲ್ಲೆಯಲ್ಲಿ ಇನ್ನು ನಾಲ್ಕೈದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಇದೇ ರೀತಿ ಒಂದು ವಾರ ಮಳೆ ಸುರಿದರೆ ಭೂಮಿ ತಂಪಾಗಿ ಬೇಸಿಗೆ ಬಿಸಿಯನ್ನು ಇಂಗಿಸಲಿದೆ. ಇದರಿಂದ ಯಾವುದೇ ಬಿಸಿ ಗಾಳಿಯ ಅಡ್ಡಪರಿಣಾಮ ಜಿಲ್ಲೆಯ ಜನರ ಮೇಲೆ ಬೀರದಂತಾಗಲಿದೆ.

ರೈತರ ಮೊಗದಲ್ಲಿ ಹರ್ಷ

ಪ್ರಮುಖವಾಗಿ ಈ ಮಳೆ ನಗರ ವಾಸಿಗಳಿಗೆ ಅಲ್ಲದೆ ಪ್ರಮುಖವಾಗಿ ರೈತರಿಗೆ ಹರ್ಷ ತಂದಿದೆ. ಬೇಸಿಗೆ ಸಮಯದಲ್ಲಿ ರೈತರು ಜಾನುವಾರುಗಳ ಪಾಲನೆಗೆ ಸಾಕಷ್ಟು ಪಡಿಪಾಟಲು ಪಡಬೇಕಾಗಿತ್ತು. ಇದೇ ಕಾರಣಕ್ಕೆ ಕಳೆದ ವರ್ಷ ಜಿಲ್ಲಾಡಳಿತದಿಂದ ಜಿಲ್ಲೆಯಿಂದ ಜಾನುವಾರು ಮೇವುಗಳನ್ನು ಬೇರೆಡೆಗೆ ಸಾಗಣೆ ಮಾಡದಂತೆ ಆದೇಶ ಹೊರಡಿಸಲಾಗಿತ್ತು. ಅಷ್ಟೇ ಅಲ್ಲದೇ ಕೆರೆ-ಕಟ್ಟೆಗಳಲ್ಲಿ ನೀರು ಖಾಲಿಯಾಗಿದ್ದರಿಂದ ಟ್ಯಾಂಕರ್ ಮೂಲಕ ಟ್ಯಾಂಕಿಗಳಿಗೆ ನೀರು ಸರಬರಾಜು ಮಾಡಲಾಗಿತ್ತು. ಜನರಿಗೂ ಸಹ ಕುಡಿಯುವ ನೀರಿಗೆ ತೊಂದರೆಯಾಗಿ ಹಳ್ಳಿ ಹಳ್ಳಿಗೂ ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಬೋರ್ ವೇಲ್ ಗಳನ್ನು ಬಾಡಿಗೆಗೆ ಪಡೆದು ಜನರಿಗೆ ನೀರು ಒದಗಿಸಲಾಗಿತ್ತು. ಪ್ರಸ್ತುತ ಈ ವರ್ಷದ ಆರಂಭದ ಬೇಸಿಗೆಯಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಹುಲುಸಾಗಿ ಹುಲ್ಲು ಬೆಳೆಯಲು ಸಹಾಯಕವಾಗಿದ್ದು ಜಾನುವಾರುಗಳಿಗೆ ಯಾವುದೇ ರೀತಿ ಮೇವಿನ ಸಮಸ್ಯೆ ಎದುರಾಗುವುದಿಲ್ಲ. ಅದಷ್ಟೇ ಅಲ್ಲದೇ ನೀರಿಲ್ಲದೇ ನಿಂತು ಹೋದ ಬೋರ್ ವೇಲ್‌ಗಳಲ್ಲೂ ಈ ವರ್ಷ ನೀರು ಬರುವಂತಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಜಾನುವಾರುಗಳಿಗೆ ಬೇಕಾದ ಮೇವುಗಳನ್ನು ಬೆಳೆಯಲು ಹಾಗೂ ಇತರೆ ಬೇಸಿಗೆ ಬೆಳೆ ಬೆಳೆಯಲು ಅನುಕೂಲಕರವಾಗಿದೆ.

ಜಲಾಶಯಗಳಲ್ಲೂ ಭರ್ತಿ

ಕಳೆದ ವರ್ಷ ಸುರಿದ ಭರಪೂರ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಹೇಮಾವತಿ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. 36 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 20 ಟಿಎಂಸಿ ನೀರು ಇದೆ. ಮೂರು ಜಿಲ್ಲೆಗಳಿಗೆ ನೀರು ನೀಡುವ ಹೇಮಾವತಿಯಲ್ಲಿ ನೀರು ಭರಪೂರ ಇರುವುದರಿಂದ ಈ ವರ್ಷ ಬೇಸಗಿಯಲ್ಲಿ ಮಳೆಯಾಗದಿದ್ದರೂ ಜಾನುವಾರುಗಳಿಗೆ ಹಾಗೂ ಜನರಿಗೆ ನೀರು ಕೊಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಹೇಮಾವತಿ ಜಲಾಶಯದಲ್ಲಿ ವರ್ಷದಲ್ಲಿ ಉತ್ತಮವಾಗಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 10 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹವಾಗಿತ್ತು. ಆದರೆ ಈ ವರ್ಷ 20 ಟಿಎಂಸಿ ನೀರು ಸಂಗ್ರಹವಿದೆ. ಹೀಗಾಗಿ ಕೆರೆಗಳಿಗೆ ನೀರು ತುಂಬಿಸಲು ಮತ್ತು ಜನರಿಗೆ ನೀರು ಕೊಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆರಂಭದಲ್ಲಿಯೇ ಉತ್ತಮ ಮಳೆಯಾಗುತ್ತಿರುವುದು ಸಹ ಇನ್ನು ಹೆಚ್ಚಿನ ನೀರು ಸಂಗ್ರಹಕ್ಕೆ ಸಹಕಾರಿಯಾಗಲಿದೆ ಎಂದು ಹೇಮಾವತಿ ಜಲಾಶಯ ಎಇಇ ಅರುಣ್ ತಿಳಿಸಿದ್ದಾರೆ.

ತಪ್ಪಿದ ಕಾಡ್ಗಿಚ್ಚು ಆತಂಕ

ಈ ವರ್ಷ ಫೆಬ್ರವರಿ ತಿಂಗಳಿನಲ್ಲಿಯೇ ಬಿಸಿಲ ಬೇಗೆ ಮಲೆನಾಡು ಭಾಗದಲ್ಲೂ ಭಾರೀ ಪ್ರಮಾಣದಲ್ಲಿಯೇ ಹೆಚ್ಚಾಗಿಯೇ ಇತ್ತು. ಬಿಸಿಲ ಧಗೆಯಿಂದ ಕಾಡುಗಳಲ್ಲಿ ಮರಗಳೆಲ್ಲ ಒಣಗಿ ಆಕಸ್ಮಿಕ ಬೆಂಕಿಯಿಂದ ಕಾಡ್ಗಿಚ್ಚಿಗೆ ಒಳಗಾಗುವ ಸಾಧ್ಯತೆಯ ಆತಂಕ ಈ ವರ್ಷ ಹೆಚ್ಚಾಗಿಯೇ ಇತ್ತು. ಆದರೆ, ಈಗ ಸುರಿದಿರುವ ಮಳೆಯಿಂದಾಗಿ ಮರಗಳು ತಂಪಾಗಿ ಹಚ್ಚ ಹಸಿರಾಗಲಿವೆ. ಭೂಮಿಯೂ ತಂಪಾಗಲಿದೆ. ಇದರಿಂದ ಬಹುತೇಕ ಕಾಡ್ಗಿಚ್ಚು ಆತಂಕ ಸದ್ಯಕ್ಕೆ ಮರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net