ಬೇಸಿಗೆ ಮುನ್ನವೇ ದರ ಏರಿಕೆ ಬಿಸಿ

19Ravig1A
ಬೆಳಗಾವಿ ನಗರದಲ್ಲಿ ಎಳನೀರು ಕುಡಿಯುತ್ತಿರುವ ಜನರು.
Published on

ಬೆಳಗಾವಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿಗೆ ಜನತೆ ಬಸವಳಿಯುತ್ತಿದ್ದಾರೆ. ಪರಿಣಾಮ ಬೇಸಿಗೆ ಆರಂಭದಲ್ಲಿಯೇ ಎಳನೀರಿನ ಬೆಲೆ ಏರತೊಡಗಿದೆ. ಬೆಳಗ್ಗೆ ಒಂಬತ್ತು ಗಂಟೆ ಆಗುವುದೇ ತಡ ಸೂರ್ಯ ತನ್ನ ಪ್ರತಾಪ ತೋರುತ್ತಿದ್ದು, ಮಧ್ಯಾಹ್ನ 12ರ ಬಳಿಕವಂತೂ ಜನ ಏದುಸಿರುವ ಬಿಡುತ್ತಲೇ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ದರ ಏರಿಕೆಯಾಗಿರುವುದರಿಂದ ಜನರಿಗೆ ಮತ್ತಷ್ಟು ಬಿಸಿ ತಟ್ಟುತ್ತಿದೆ.

ವಾರದಿಂದ ಜಿಲ್ಲಾದ್ಯಂತ 34ರಿಂದ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ಸಾರ್ವಜನಿಕರು ಬಿಸಿಲಿನ ಹೊಡೆತಕ್ಕೆ ನಲುಗುತ್ತಿದ್ದಾರೆ. ಮಧ್ಯಾಹ್ನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಮಾರುಕಟ್ಟೆಗೆ ಆಗಮಿಸುವ ಹಾಗೂ ರಸ್ತೆಯಲ್ಲಿ ಸಂಚರಿಸುವ ಜನ ಬಿಸಿಲಿಗೆ ಬಸವಳಿಯುತ್ತಿದ್ದಾರೆ. ದಾಹ ಆರಿಸಿಕೊಳ್ಳಲು ಜನರು ತಣ್ಣನೆಯ ಮಜ್ಜಿಗೆ, ಕಬ್ಬಿನ ಹಾಲು, ಲಸ್ಸಿ, ಲಿಂಬು ಶರಬತ್, ಐಸ್‌ಕ್ರೀಮ್ ಸೇರಿ ತಂಪು ಪಾನೀಯ ಸೇವನೆ ಮಾಡುತ್ತಿದ್ದಾರೆ. ಹೀಗಾಗಿ ತಂಪು ಪಾನೀಯ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ಬಿಸಿಲು ಹೆಚ್ಚಿದಂತೆ ತಂಪು ಪಾನೀಯ ಮಾರಾಟವೂ ಅಧಿಕಗೊಳ್ಳುತ್ತಿದ್ದು, ವ್ಯಾಪಾರಿಗಳು ಖುಷಿಯಲ್ಲಿದ್ದಾರೆ.

ಬಿಸಿಲಿನ ತಾಪ ತಣಿಸುವಲ್ಲಿ ಅಗ್ರಸ್ಥಾನದಲ್ಲಿರುವ ಕಲ್ಲಂಗಡಿಗೆ ಬಾರಿ ಬೇಡಿಕೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಇನ್ನೂ ಕಲ್ಲಂಗಡಿ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ. ವ್ಯಾಪಾರಿಗಳು ಬೆಲೆ ಹೆಚ್ಚಿಸಿದ್ದರಿಂದ ಬಿಸಿಲಿನಿಂದಾಗಿ ತಲೆ ಮಾತ್ರವಲ್ಲ ಕಲ್ಲಂಗಡಿ ಗ್ರಾಹಕರ ಜೇಬೂ ಸುಡುತ್ತಿದೆ. ಸಣ್ಣ ಗಾತ್ರದ ಹಣ್ಣಿನ ಬೆಲೆ 50 ರೂ.ದಿಂದ 100ರ ರೂ.ವರೆಗಿದ್ದರೆ, ದೊಡ್ಡ ಗಾತ್ರದ ಹಣ್ಣುಗಳು 130ರಿಂದ 150 ರೂ.ವರೆಗೆ ಮಾರಾಟ ಆಗುತ್ತಿವೆ.

ಎಳನೀರಿನ ಬೆಲೆಯೂ ಹೆಚ್ಚಾಗಿದ್ದು ವಾರದ ಹಿಂದೆ 20 ರೂಪಾಯಿಗೂ ಸಿಗುತ್ತಿದ್ದ ಸಣ್ಣಕಾಯಿ ಎಳನೀರು, ಇದೀಗ 30 ರೂ.ಆಗಿದೆ. ಆದರೂ, ರಸಾಯನ ಮಿಶ್ರಿತ ತಂಪು ಪಾನೀಯಗಳಿಗಿಂತ ಎಳೆನೀರು ಶ್ರೇಷ್ಠ ಎಂದು ಜನ ಎಳನೀರು ಕುಡಿಯುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿದ್ದರಿಂದ ನಗರದ ಪ್ರತಿಯೊಂದು ಜನನಿಬಿಡ ಪ್ರದೇಶಗಳಲ್ಲಿ ಎರಡ್ಮೂರು ಎಳನೀರು ಅಂಗಡಿಗಳು ತೆಲೆಎತ್ತಿದ್ದು, 30ರಿಂದ 35ರೂ.ಗೆ ಒಂದರಂತೆ ಎಳನೀರು ಮಾರಾಟವಾಗುತ್ತಿದೆ. ಆದರೂ ಜನ ಮುಗಿಬೀಳುವ ದೃಶ್ಯ ನಗರ ಮಾತ್ರವಲ್ಲ ಹೊರವಲಯದಲ್ಲಿನ ಹೆದ್ದಾರಿಯಲ್ಲಿಯೂ ಸಾಮಾನ್ಯವಾಗಿದೆ.

ಹಾವೇರಿ ವ್ಯಾಪಾರಸ್ಥರೇ ಹೆಚ್ಚು: ಬೇಸಿಗೆ ಆರಂಭದಲ್ಲಿಯೇ ಎಳನೀರಿನ ಬೆಲೆ ಏರತೊಡಗಿದೆ. ಉತ್ತಮ ಧಾರಣೆ ಇರುವ ಕಾರಣ, ತೆಂಗಿನಕಾಯಿ ಬದಲು ಎಳನೀರನ್ನೇ ಮಾರಾಟ ಮಾಡಲು ರೈತರು ಉತ್ಸಾಹ ತೋರುತ್ತಿದ್ದಾರೆ. ಆದರೆ, ಎಳೆನೀರು ವ್ಯಾಪಾರದಲ್ಲಿ ಹೊರಜಿಲ್ಲೆಯ ವ್ಯಾಪಾರಸ್ಥರಿಗೇ ಹೆಚ್ಚು ಲಾಭ ಲಭಿಸುತ್ತಿದೆ. 1 ಸಾವಿರ ಎಳನೀರಿಗೆ 12ರಿಂದ 15 ಸಾವಿರದವರೆಗೆ ದರ ಇದ್ದು, ಹಾವೇರಿ ಮೂಲದ ಸುಮಾರು ಐವತ್ತಕ್ಕೂ ಅಧಿಕ ಎಳನೀರು ವ್ಯಾಪಾರಸ್ಥರು ನಗರಾದ್ಯಂತ ವ್ಯಾಪಾರದಲ್ಲಿ ತೊಡಗಿದ್ದು, ಎಳನೀರು ಮಾರಿಯೇ ಜೀವನ ರೂಪಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಪತ್ರಿಕೆ ಜತೆ ಮಾತನಾಡಿದ ಶಿಗ್ಗಾಂವಿ ಮೂಲದ ವ್ಯಾಪಾರಿಯೊಬ್ಬರು, ಹಾವೇರಿಯಿಂದ ಪ್ರತಿದಿನವೂ ಎಳನೀರು ಬರುತ್ತಿದೆ. ಗಾತ್ರ ಹಾಗೂ ಎಳನೀರಿನ ಪ್ರಮಾಣಕ್ಕೆ ತಕ್ಕಂತೆ 500 ರಿಂದ ಸಾವಿರ ಕಾಯಿಗಳನ್ನು ಮತ್ತೊಬ್ಬರ ಮೂಲಕ 3 ರಿಂದ 5ರೂ.ದರದಲ್ಲಿ ಕಮಿಷನ್ ನೀಡಿ ಖರೀದಿಸಿ ಮಾರಾಟ ಮಾಡುತ್ತಿದ್ದೇವೆ. 12 ವರ್ಷಗಳಿಂದ ಬೆಳಗಾವಿಯಲ್ಲೇ ವಾಸವಾಗಿದ್ದೇವೆ ಎಂದರು.

ಲಿಂಬೆ ಹಣ್ಣಿಗೂ ಬಲು ಬೇಡಿಕೆ

ಝಳದ ತಾಪದಿಂದ ಪಾರಾಗಲು ಹೆಚ್ಚಿನ ಸಂಖ್ಯೆಯ ಜನ ಲಿಂಬೆ ಹಣ್ಣಿನ ಶರಬತ್ ಸೇವಿಸುತ್ತಾರೆ. ಹೀಗಾಗಿ ಲಿಂಬೆ ಹಣ್ಣಿಗೆ ಈ ವರ್ಷ ಭಾರಿ ಡಿಮ್ಯಾಂಡ್ ಬಂದಿದ್ದು, ಹೊರಗಡೆ ಒಂದು ಗ್ಲಾಸ್ ಲಿಂಬು ಸೋಡಾಗೆ 25 ರಿಂದ 30 ರೂ.ಪಡೆಯುತ್ತಿದ್ದಾರೆ. ಇನ್ನು ಮನೆಯಲ್ಲೇ ಶರಬತ್ ಮಾಡಿಕೊಳ್ಳೋಣ ಎಂದರೆ ಒಂದು ಲಿಂಬೆಹಣ್ಣಿನ ಬೆಲೆ ಬರೋಬ್ಬರಿ 5ರೂ.ಆಗಿರುವುದು ಮತ್ತಷ್ಟು ಬೆವರುವಂತಾಗಿದೆ.

ದಿನೇ ದಿನೆ ಬಿಸಿಲಿ ಝಳ ಹೆಚ್ಚಾಗುತ್ತಿದೆ. ಬೆಳಗ್ಗೆ ಮಂಜು ಕಂಡರೂ 9 ಗಂಟೆಯಾಗುವಷ್ಟರಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಮಧ್ಯಾಹ್ನವಂತೂ ಪಾನೀಯ ಅನಿವಾರ್ಯವಾಗಿದೆ. ಬೇಸಿಗೆ ಕಾರಣದಿಂದ ಹಣ್ಣುಗಳನ್ನು ಸಹ ವ್ಯಾಪಾರಸ್ಥರು ದುಬಾರಿ ಬೆಲೆಗೆ ಮಾರಾಟಮಾಡುತ್ತಿದ್ದಾರೆ. ಆದರೂ, ಎಳನೀರು ಸೇವಿಸುತ್ತಿದ್ದೇವೆ.| ಶಿವು ಪಾಟೀಲ, ಶೀಲಾ ಪಾಟೀಲ, ಶೈಲಾ ಕುಲಕರ್ಣಿ ಬೆಳಗಾವಿ ನಿವಾಸಿಗಳು

| ಶಿವಾನಂದ ಕಲ್ಲೂರ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net