ಬೇಸಿಗೆ ಬೆಳೆಗಳಿಗೆ ಸಿಗುತ್ತಿಲ್ಲ ಬೆಲೆ

20 Dwd 1A
Published on

ಮಂಜುನಾಥ ಅಂಗಡಿ ಧಾರವಾಡ

ಕರೊನಾ ಲಾಕ್​ಡೌನ್ ಪ್ರತಿಯೊಬ್ಬರಿಗೂ ಬಿಸಿ ತಟ್ಟಿಸಿದೆ. ಮುಂಗಾರು ಪೂರ್ವ ಬೇಸಿಗೆಯಲ್ಲಿ ವಿವಿಧ ತರಕಾರಿ ಬೆಳೆದು ಲಾಭದ ಕನಸು ಕಂಡಿದ್ದ ರೈತರಿಗೆ ಭ್ರಮನಿರಸನವಾಗಿದೆ. ಬಿರು ಬೇಸಿಗೆಯಲ್ಲಿ ದುಡಿದು ತರಕಾರಿ ಬೆಳೆದ ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಸಾಗಣೆ, ಮಾರಾಟದ ಜಂಜಾಟಕ್ಕೆ ಹೋಗದ ಅನೇಕ ರೈತರು ಬೆಳೆದು ನಿಂತ ತರಕಾರಿಯನ್ನು ಕಟಾವು ಮಾಡಲೂ ಮುಂದಾಗುತ್ತಿಲ್ಲ.

ಜಿಲ್ಲೆಯ ರೈತರು ಹಿಂಗಾರು ಜೋಳ, ಗೋಧಿ, ಹತ್ತಿ, ಗೋವಿನಜೋಳ ಒಕ್ಕಣೆಯ ನಂತರ ಮುಂಗಾರು ಪೂರ್ವ ಬೇಸಿಗೆ ಬೆಳೆಗಳನ್ನು ಬೆಳೆದಿದ್ದಾರೆ. ಮೆಣಸಿನಕಾಯಿ, ಟೊಮ್ಯಾಟೊ, ಬೆಂಡೆ, ಇತರ ಬೆಳೆಗಳನ್ನು ತಿಂಗಳುಗಟ್ಟಲೇ ದುಡಿದು ಬೆಳೆಸಿದ್ದಾರೆ. ಆದರೆ ಕರೊನಾ ಲಾಕ್​ಡೌನ್ ಘೊಷಣೆಯಾದಾಗಿನಿಂದ ಮಾರುಕಟ್ಟೆಗೆ ಹೋಗಲೂ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಮೇಲಾಗಿ ತರಕಾರಿ ಬೆಳೆಗಳ ದರ ಪಾತಾಳಕ್ಕೆ ಕುಸಿದಿರುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು.

ಹಸಿ ಮೆಣಸಿನಕಾಯಿ ಕೇಳೋರಿಲ್ಲ: ಬಂದ್ ಪರಿಣಾಮ ಬೇಸಿಗೆಯಲ್ಲಿ ಬೆಳೆದ ಹಸಿ ಮೆಣಸಿನಕಾಯಿ ಕೇಳೋರಿಲ್ಲದಂತಾಗಿದೆ. ಮಾರ್ಚ್, ಏಪ್ರಿಲ್​ನಲ್ಲಿ ಪ್ರತಿ 10 ಕೆಜಿಗೆ ಗರಿಷ್ಠ 500- 600 ರೂ. ಸಿಗುತ್ತಿತ್ತು. ಸದ್ಯ ಮಾರುಕಟ್ಟೆಯಲ್ಲಿ 60 ರೂ.ಗೆ 10 ಕೆಜಿ ಮಾರಾಟವಾಗುತ್ತಿದೆ. ಕ್ವಿಂಟಾಲ್ ಕಾಯಿ ಕಟಾವು ಮಾಡಲು 200 ರೂ.ದಂತೆ ಕನಿಷ್ಠ 4 ಕೂಲಿ ಆಳುಗಳು ಬೇಕು. ಇನ್ನು ಸಾಗಣೆಗೆ ಬಾಡಿಗೆ, ದಲಾಲಿ, ಹಮಾಲಿ ಬೇರೆ. ಇದೆಲ್ಲವನ್ನು ಲೆಕ್ಕ ಹಾಕಿರುವ ರೈತರು, ಮೆಣಸಿನಕಾಯಿ ಕಟಾವು ಮಾಡುವುದನ್ನೇ ಬಿಟ್ಟಿದ್ದಾರೆ.

ಖರೀದಿ ಕಡಿಮೆ: ಲಾಕ್​ಡೌನ್ ಪರಿಣಾಮ ತರಕಾರಿ ಖರೀದಿ ಪ್ರಮಾಣ ಕಡಿಮೆಯಾಗಿದೆ. ದಿನಬಳಕೆಗೆ ಮಾತ್ರ ಖರೀದಿ ನಡೆಯುತ್ತಿರುವುದು ದರ ಕುಸಿತಕ್ಕೆ ಕಾರಣ. ವಿವಿಧ ಹಾಸ್ಟೆಲ್​ಗಳು, ಪಿಜಿಗಳು, ಹೋಟೆಲ್​ಗಳು ಆರಂಭವಾದರೆ ಸ್ಥಳೀಯವಾಗಿ ಮಾರಾಟ ಹೆಚ್ಚುತ್ತದೆ. ಆದರೆ ಎಲ್ಲವೂ ಬಂದ್ ಇರುವುದರಿಂದ ತರಕಾರಿಗೆ ಬೆಲೆ ಇಲ್ಲದಾಗಿದೆ. ಆದಾಗ್ಯೂ ಬಿಡಿ ಮಾರಾಟಗಾರರು ತರಕಾರಿಗಳನ್ನು ಕನಿಷ್ಠ 30 ರೂ.ಗೆ ಕೆಜಿಯಂತೆ ಮಾರಾಟ ಮಾಡುತ್ತಿದ್ದಾರೆ.

ಕೇವಲ ಹಸಿ ಮೆಣಸಿನಕಾಯಿ ಅಲ್ಲದೆ ಬೆಂಡೆಕಾಯಿ, ಟೊಮ್ಯಾಟೊ, ಹೂಕೋಸು, ಮೂಲಂಗಿ, ಗಜ್ಜರಿಗೂ ಬೆಲೆ ಇಲ್ಲ. ಕಟಾವು ಮಾಡಿ ಕೈ ಸುಟ್ಟುಕೊಳ್ಳುವುದಕ್ಕಿಂತ ಮನೆಯಲ್ಲಿರುವುದು ಲೇಸು. ಬೇಸಿಗೆಯಲ್ಲಿ ತಿಂಗಳುಗಟ್ಟಲೆ ದುಡಿದು ಬೆಳೆದರೂ ದರ ಸಿಗದಿರುವುದು ಬೇಸರ ತಂದಿದೆ.ಬಸಪ್ಪ, ಕವಲಗೇರಿ ರೈತ ಲಾಕ್​ಡೌನ್​ನಿಂದ ರೈತರಷ್ಟೆ ಅಲ್ಲದೆ ವ್ಯಾಪಾರಸ್ಥರಿಗೂ ಬಿಸಿ ತಟ್ಟಿದೆ. ಮಾರ್ಚ್, ಏಪ್ರಿಲ್​ನಲ್ಲಿ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಸಿ ಮೆಣಸಿನಕಾಯಿ ಪಕ್ಕದ ಜಿಲ್ಲೆಗಳಿಗೆ ರಫ್ತಾಗುತ್ತಿತ್ತು. ಈಗ ವಾಹನ ಸಂಚಾರವಿಲ್ಲ. ಹೀಗಾಗಿ ದರ ಸಿಗುತ್ತಿಲ್ಲ. ಕೆಲ ದಿನಗಳಿಂದ 10 ಕೆಜಿಗೆ 30 ರೂ. ಇದ್ದ ದರ ಈಗ 60 ರೂ.ಗೆ ಏರಿದೆ. ಲಾಕ್​ಡೌನ್ ಮುಗಿಯುವವರೆಗೆ ಇದು ಹೀಗೇ ಇರಬಹುದು.ಮಲ್ಲಿಕಜಾನ್ ಬೆರಕಿ, ತರಕಾರಿ ವ್ಯಾಪಾರಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net