ಬೇಸಿಗೆ ಬೆಳೆ ಬೆಳೆಯಲು ಆತಂಕವಿಲ್ಲ

31bdvt2
ಬಿ.ಆರ್.ಪ್ರಾಜೆಕ್ಟ್‌ನಲ್ಲಿರುವ ಭದ್ರಾ ಜಲಾಶಯಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಬಾಗಿನ ಸಮರ್ಪಿಸಿದರು. ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಮುನಿಯಪ್ಪ, ನಾಗರಾಜ್, ಭಾಗ್ಯಾ ರಾಘವೇಂದ್ರ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಭದ್ರಾವತಿ

ಭದ್ರಾ ಜಲಾಶಯಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ನೂರಾರು ರೈತ ಮುಖಂಡರೊಂದಿಗೆ ತೆರಳಿ ಭಾನುವಾರ ಬಾಗಿನ ಸಮರ್ಪಿಸಿದರು.

ನಂತರ ಮಾತನಾಡಿದ ಅವರು, ಈ ವರ್ಷ ಉತ್ತಮ ಮಳೆಯಾಗಿದೆ. ಅಣೆಕಟ್ಟು ಭರ್ತಿಯಾಗಿ ನಾಲೆಗೆ ನೀರು ಹರಿಸಲಾಗುತ್ತಿದೆ. 2.50 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಅಡಕೆ, ತೆಂಗು, ಭತ್ತ, ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕೂಡ ನೀಗಿದೆ. ಈ ವರ್ಷವೂ ರೈತರು ಬೇಸಿಗೆ ಬೆಳೆ ಬೆಳೆಯಲು ಯಾವುದೇ ಆತಂಕವಿಲ್ಲ. ಆದರೂ ನೀರನ್ನು ಸದ್ಬಳಕೆ ಮಾಡಿಕೊಂಡು ಅಚ್ಚುಕಟ್ಟು ಭಾಗದ ಕೊನೆಯ ರೈತರಿಗೂ ನೀರು ದೊರಕುವಂತಾಗಬೇಕು ಎಂದರು.

ಭದ್ರಾ ಅಚ್ಚುಕಟ್ಟು ಮಾತ್ರವಲ್ಲ ಬಯಲು ಸೀಮೆಯ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೂ ನೀರು ಹರಿಸಲು ಅವಕಾಶವಿದೆ. ಆದರೆ ಯೋಜನೆ ಪೂರ್ಣಗೊಳ್ಳದೆ ಅಣೆಕಟ್ಟೆಯ ಹೆಚ್ಚುವರಿ ನೀರು ನದಿ ಮೂಲಕ ಸಮುದ್ರ ಸೇರುತ್ತಿದೆ. ನೀರಿಗೆ ಬಹಳ ಮಹತ್ವವಿದೆ ಎಂಬುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನಗಂಡು ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಮುನಿಯಪ್ಪ, ಸಂಘಟನಾ ಕಾರ್ಯದರ್ಶಿ ಚಿಕ್ಕಬ್ಬಿಗೆರೆ ನಾಗರಾಜ್, ರಾಜ್ಯ ಮಹಿಳಾ ಘಟಕದ ಭಾಗ್ಯಾ ರಾಘವೇಂದ್ರ, ದಾವಣಗೆರೆ ಜಿಲ್ಲಾಧ್ಯಕ್ಷ ಮರುಳಸಿದ್ದಯ್ಯ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ತುಮಕೂರಿನ ಕುಮಾರಯ್ಯ, ಪುಷ್ಪಾ, ಶಿವಮೊಗ್ಗ ಜಿಲ್ಲಾಧ್ಯಕ್ಷ ಹುಲಿಮಟ್ಟಿ ಜಯಣ್ಣ, ಪಿ.ಶೇಖರಪ್ಪ, ಎಂ.ಡಿ.ನಾಗರಾಜ್, ತಾಲೂಕು ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಹಾಲಪ್ಪ, ರಾಜಶೇಖರ್, ಅಕ್ಕಿರಾಜು, ಮೂರ್ತಿ ಇತರರಿದ್ದರು.

ಹಣ ಬಿಡುಗಡೆಗೊಳಿಸಲಿ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದಿನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಇದುವರೆಗೂ ಬಿಡುಗಡೆಯಾಗಿಲ್ಲ. ಈ ಎರಡೂ ಸರ್ಕಾರಗಳು ಹಣ ಬಿಡುಗಡೆ ಮಾಡುವ ಮೂಲಕ ಬಯಲು ಸೀಮೆಗೆ ನೀರು ಕೊಡಬೇಕು. ಭದ್ರಾ ಅಚ್ಚಕಟ್ಟು ವ್ಯಾಪ್ತಿಯ ನಾಲಾ ಗೇಟುಗಳ ದುರಸ್ತಿ ಮಾಡದೆ ನೀರು ವ್ಯರ್ಥವಾಗಿ ಹರಿಯುತ್ತಿದೆ. ವ್ಯರ್ಥವಾಗುವ ನೀರನ್ನು ತಡೆಯಲು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಜನ ಜಾನುವಾರು, ಜಮೀನುಗಳಿಗೆ ನೀರೊದಗಿಸುವ ಅಣೆಕಟ್ಟು ಹಳೆಯದಾಗಿದೆ. ಸುರಕ್ಷಾ ಸಮಿತಿಯವರು ಕ್ರಸ್ಟ್‌ಗೇಟ್‌ಗಳನ್ನು ಬದಲಾವಣೆ ಮಾಡಲು ಶಿಫಾರಸು ಮಾಡಿದ್ದಾರೆ. ಅದರಂತೆ ಬದಲಾವಣೆ ಮಾಡಬೇಕು ಎಂದು ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net