

ಚಿಂತಾಮಣಿ : ಬೇಸಿಗೆ ಆರಂಭವಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಆಗದಂತೆ ಈಗಲೇ ಮುಂಜಾಗ್ರತೆ ವಹಿಸಿ ಎಂದು ಶಾಸಕ ಎಂ. ಕೃಷ್ಣಾರೆಡ್ಡಿ ಹೇಳಿದರು.
ತಾಪಂ ಸಂಭಾಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ನೀರಿನ ಸಮಸ್ಯೆ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಲೇ ಸಜ್ಜಾಗಿ ಎಂದು ಸೂಚಿಸಿದರು.ಕೃಷಿ ಇಲಾಖೆಯಲ್ಲಿ ದಲ್ಲಾಳಿಗಳ ಹಾಗೂ ಏಜೆಂಟ್‌ಗಳ ಹಾವಳಿ ಹೆಚ್ಚಾಗಿದ್ದು ರೈತರಿಗೆ ಸರ್ಕಾರದ ಸೌಲಭ್ಯಗಳು ನೇರವಾಗಿ ಸಿಗುತ್ತಿಲ್ಲ. ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸುತ್ತಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಮರ ಕಡಿಯವವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕ್ರಮಕೈಗೊಳ್ಳುವುದರೊಂದಿಗೆ ಗಿಡ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು. ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರೊಂದಿಗೆ ಶಾಮೀಲು ಆಗದಂತೆ ಎಚ್ಚರವಹಿಸಿ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.ತಾಲೂಕಿನಲ್ಲಿ 67383 ಬಿಪಿಎಲ್ ಕಾರ್ಡ್‌ದಾರರು ಇದ್ದಾರೆ ಎಂದು ಆಹಾರ ಇಲಾಖೆ ಅಧಿಕಾರಿ ಸುಧಾ ಮಾಹಿತಿ ನೀಡಿದಾಗ 67383 ಕಾರ್ಡ್‌ಗಳನ್ನು ಪರಿಶೀಲಿಸಿ ಅದರಲ್ಲಿ ಶ್ರೀಮಂತರಿದ್ದರೆ ಅಂತಹ ಕಾರ್ಡ್‌ಗಳನ್ನು ರದ್ದುಗೊಳಿಸಿ ಎಂದು ಶಾಸಕರು ಸೂಚಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶನ ಸದಸ್ಯ ಡಾ.ಸಿ.ಎ. ಕಿಶೋರ್ ಮಾತನಾಡಿ, ನ್ಯಾಯಾಲಯ ಸೇರಿ ಎಲ್ಲ ಇಲಾಖೆಗಳಲ್ಲಿ ಕನ್ನಡದಲ್ಲಿಯೇ ದಾಖಲೆಗಳನ್ನು ಪಡೆಯಬೇಕೆಂಬ ಆದೇಶವನ್ನು ಸರ್ಕಾರ ನೀಡಿದ್ದು, ಎಲ್ಲ ಇಲಾಖೆಯವರು ಸಹಕರಿಸಬೇಕೆಂದು ಮನವಿ ಮಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಡಿ. ಹನುಮಂತರಾಯಪ್ಪ ಮತ್ತಿತರರಿದ್ದರು.
ನಿದ್ದೆಗೆ ಜಾರಿದ ಅಧಿಕಾರಿಗಳು: ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಇಲಾಖೆ ಅಧಿಕಾರಿಗಳು ವೇದಿಕೆ ಮುಂಭಾಗಕ್ಕೆ ಹೋಗಿ ವರದಿ ಒಪ್ಪಿಸುತ್ತಿದ್ದರೆ ಕೆಲ ಅಧಿಕಾರಿಗಳು ಮೊಬೈಲ್ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದರು. ಮತ್ತೆ ಕೆಲವರು ಗುಸು ಗುಸು ಚರ್ಚೆಗಳಲ್ಲಿ ತೊಡಗಿದ್ದರು. ಪೆರಮಾಚನಹಳ್ಳಿ ಪಿಡಿಒ ಸಂಪೂರ್ಣ ನಿದ್ರೆಗೆ ಜಾರಿದ್ದರು.